×
Ad

ಕಲಬುರಗಿ | ಬೌದ್ಧ ಧರ್ಮವು ಶಾಂತಿ, ಕರುಣೆ, ಅಹಿಂಸೆ, ಸಮಾನತೆಯ ತತ್ವಗಳ ಮೇಲೆ ಆಧಾರಿತವಾಗಿದೆ : ಭಂತೆ ಅಮರ ಜ್ಯೋತಿ

Update: 2025-06-02 22:59 IST

ಕಲಬುರಗಿ : ಬೌದ್ಧ ಧರ್ಮವು ಶಾಂತಿ, ಕರುಣೆ, ಅಹಿಂಸೆ ಮತ್ತು ಸಮಾನತೆಯ ತತ್ವಗಳ ಮೇಲೆ ಆಧಾರಿತವಾಗಿದೆ. ದೈನಂದಿನ ಜೀವನದಲ್ಲಿ ಈ ತತ್ವಗಳನ್ನು ಅಳವಡಿಸಿಕೊಂಡರೆ, ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು. ಬುದ್ಧನ ಧಮ್ಮವು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಬದಲಿಗೆ ಜೀವನವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಒಂದು ಜೀವನ ಶೈಲಿಯಾಗಿದೆ ಎಂದು ಬೆಳಮಗಿ ಬೌದ್ಧ ವಿಹಾರದ ಸಂಸ್ಥಾಪಕರಾದ ಭಂತೆ ಅಮರ ಜ್ಯೋತಿ ಹೇಳಿದರು.

ಆಳಂದ ತಾಲೂಕಿನ ಬೆಳಮಗಿ ಗ್ರಾಮದಲ್ಲಿ ಸೋಮವಾರ ಧ್ಯಾನ ಭೂಮಿ ಬೌದ್ಧ ವಿಹಾರದ 31ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬೌದ್ಧ ಧರ್ಮದ ಸಂಸ್ಕಾರ ವಿಧಿಗಳಾದ ಧ್ಯಾನ, ಸಂಗೀತ, ಸಾಮೂಹಿಕ ಪ್ರಾರ್ಥನೆ ಮತ್ತು ಧಮ್ಮ ಚರ್ಚೆಯ ಮೂಲಕ ಮನಶಾಂತಿ ಮತ್ತು ಆತ್ಮಿಕ ಜಾಗೃತಿಯನ್ನು ಸಾಧಿಸುವುದಾಗಿದೆ. ಈ ವಿಧಿಗಳು ವ್ಯಕ್ತಿಯ ಒಳಗಿನ ಶಕ್ತಿಯನ್ನು ಜಾಗೃತಗೊಳಿಸುವುದರ ಜೊತೆಗೆ ಸಮಾಜದಲ್ಲಿ ಸಾಮರಸ್ಯವನ್ನು ತರುತ್ತವೆ ಎಂದರು.

ಕಾರ್ಯಕ್ರಮವನ್ನು ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕ ಅಧ್ಯಕ್ಷ ರಮೇಶ ಲೋಹಾರ ಮಾತನಾಡಿದ ಅವರು, ಬುದ್ಧ, ಬಸವ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರವರ ತತ್ವ-ಸಿದ್ಧಾಂತಗಳನ್ನು ಅನುಸರಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯ, ಸಮಾನತೆ ಮತ್ತು ನೈತಿಕ ಮೌಲ್ಯಗಳನ್ನು ಸ್ಥಾಪಿಸಬಹುದು. ಬೆಳಮಗಿ ಗ್ರಾಮವನ್ನು ಸಂಸ್ಕಾರ ಕೇಂದ್ರವನ್ನಾಗಿ ರೂಪಿಸಲು ಮತ್ತು ಬೌದ್ಧ ವಿಹಾರದ ಕಲ್ಯಾಣ ಕಾರ್ಯಕ್ಕಾಗಿ ಲಭ್ಯವಿರುವ ಮೂಲಭೂತ ಸೌಕರ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಪಾರ್ವತಿ ಜಿಂಜೆ, ಕಲ್ಯಾಣಿ ತಡಕಲ್, ಮಲ್ಲಿಕಾರ್ಜುನ ಶೃಂಗೇರಿ, ನಿವೃತ್ತ ಶಿಕ್ಷಕ ನಾಮದೇವ ಕೊರಳ್ಳಿ, ಸೇರಿದಂತೆ ಹಲವಾರು ಗಣ್ಯರು ಭೌದ್ಧ ಅನುಯಾಯಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News