ಕಲಬುರಗಿ | ಬಿಜೆಪಿಯವರ ಮನೆಗೆ ನೀರು ಬಿಡೋದಿಲ್ಲ ಎಂದು ಸ್ಟೇಟಸ್ ಹಾಕಿದ್ದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷನ ಮೇಲೆ ಹಲ್ಲೆ ಆರೋಪ : ಪ್ರಕರಣ ದಾಖಲು
ಕಲಬುರಗಿ: ಕಾಂಗ್ರೆಸ್ ನವರ ಮನೆಗಳಿಗೆ ಅಷ್ಟೇ ನೀರು ಬಿಡುತ್ತಾರೆ, ಬಿಜೆಪಿಗರ ಮನೆಗಳಿಗೆ ನೀರು ಹರಿಸುವುದಿಲ್ಲ ಎನ್ನುವ ವಾಟ್ಸಾಪ್ ಸ್ಟೇಟಸ್ ಹಾಕಿದ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆದಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ವಾಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ವಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಈರಣ್ಣ ಯಾರಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ವಾಡಿಯ ಪುರಸಭೆಯ ಸಿಬ್ಬಂದಿಗಳು ಕಾಂಗ್ರೆಸ್ ಮುಖಂಡರ ಮನೆಗಳಿಗೆ ನೀರು ಸರಬರಾಜು ಆಗುತ್ತಿಲ್ಲವೆಂದು, ನಮ್ಮ ಬಿಜೆಪಿ ಮನೆಗಳ ನೀರನ್ನು ಸ್ಥಗಿತಗೊಳಿಸಿ ಅನಧಿಕೃತವಾಗಿ ಮತ್ತೊಂದು ಪೈಪನ್ನು ಜೋಡಿಸಿ ಅವರಿಗೆ ಸರಬರಾಜು ಮಾಡುತ್ತಿದ್ದಾರೆ. ಇಲ್ಲಿನ ಸಿಬ್ಬಂದಿಗಳ ಬೇಜವಾಬ್ದಾರಿಗೆ ಮೇಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಈ ರೀತಿ ಸಿಬ್ಬಂದಿಗಳು ತಾರತಮ್ಯ ಅನುಸರಿಸಿದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎನ್ನುವ ವಾಟ್ಸಾಪ್ ಸ್ಟೇಟಸ್ ಹಾಕಿದ್ದರು ಎಂದು ತಿಳಿದು ಬಂದಿದೆ.
ಹಲ್ಲೆ ನಡೆಸುತ್ತಿರುವ ದೃಶ್ಯವು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.