ಕಲಬುರಗಿ| ವಿಶೇಷ ಕಾರ್ಯಾಚರಣೆ ನಡೆಸಿ ಮಂಗಗಳನ್ನು ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ
ಸಾಂದರ್ಭಿಕ ಚಿತ್ರ
ಕಲಬುರಗಿ: ಕಲಬುರಗಿ ಪ್ರಾದೇಶಿಕ ಅರಣ್ಯ ವಿಭಾಗ ವ್ಯಾಪ್ತಿಯ ಜಿಲ್ಲೆಯ ಹಲವು ತಾಲೂಕುಗಳ ಗ್ರಾಮಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ನೇತೃತ್ವದಲ್ಲಿ ವಿಶೇಷ ಪರಿಣಿತರ ತಂಡವನ್ನು ಕರೆಯಿಸಿ, ಮಂಕಿ ಟ್ರ್ಯಾಪ್ ಕೇಜ್ (Monkey Trap cage) ನ ಸಹಾಯದಿಂದ ಸುಮಾರು ಐದು–ಆರು ಕಡೆ ವಿಶೇಷ ಕಾರ್ಯಾಚರಣೆ ನಡೆಸಿ, ಅಂದಾಜು 300ಕ್ಕೂ ಅಧಿಕ ಮಂಗಗಳನ್ನು ಗ್ರಾಮ ಪ್ರದೇಶಗಳಿಂದ ಹಿಡಿದು, ಸುರಕ್ಷಿತವಾಗಿ ದಟ್ಟ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ ಎಂದು ಕಲಬುರಗಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಜಂಟಿಯಾಗಿ ಈಗಾಗಲೇ ಚಿತ್ತಾಪುರ, ಶಹಾಬಾದ್, ಕಾಳಗಿ, ಆಳಂದ, ಅಫಜಲಪೂರ, ಚಿಂಚೋಳಿ, ಜೇವರ್ಗಿ ಹಾಗೂ ಕಲಬುರಗಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಮಂಗಗಳನ್ನು ಸೆರೆಹಿಡಿದು ಸುರಕ್ಷತೆ ದೃಷ್ಟಿಯಿಂದ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.
ಪ್ರಸ್ತುತ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿ ಮಂಗಗಳು ಸಾರ್ವಜನಿಕರ ಮೇಲೆ ಏಕಾಏಕಿ ದಾಳಿ ಮಾಡಿ ಗಾಯಗೊಳಿಸಿರುವ ಹಿನ್ನೆಲೆಯಲ್ಲಿ ಈ ಗ್ರಾಮದಲ್ಲಿ ಕಳೆದ ಸುಮಾರು ಐದಾರು ದಿನಗಳಿಂದ ಅರಣ್ಯ ಇಲಾಖೆಯ ತಂಡ ಮತ್ತು ಮಂಗಗಳ ಸೆರೆಹಿಡಿಯುವ ಪರಿಣಿತ ತಂಡ ಸ್ಥಳದಲ್ಲಿ ಇದ್ದು, ಸಾರ್ವಜನಿಕರ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯ ಸಹಾಯದಿಂದ ಸಾರ್ವಜನಿಕರ ಮೇಲೆ ದಾಳಿ ಮಾಡಿದ ಮಂಗಗಳನ್ನು ಸೆರೆ ಹಿಡಿಯುವ ಪ್ರಯತ್ನ ಜಾರಿಯಲ್ಲಿದ್ದು, ಮಂಗಗಳಿಂದ ದಾಳಿಗೊಳಗಾದ ವ್ಯಕ್ತಿಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಲು ತಾಲೂಕು ವೈದ್ಯಾಧಿಕಾರಿಗಳೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ದಾಳಿಗೊಳಗಾದ ವ್ಯಕ್ತಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿರುತ್ತಾರೆ. ಮಂಗಗಳ ದಾಳಿ ತಡೆಯಲು ಸಾರ್ವಜನಿಕರು ಈ ಕೆಳಕಂಡ ಸಲಹೆಗಳನ್ನು ಅನುಸರಿಸಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕರಿಗೆ ಸಲಹೆಗಳು: ಶಾಲೆಗಳು, ದೇವಾಲಯಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಂಗಗಳಿಗೆ ಆಹಾರ ನೀಡಬಾರದು, ಮನೆ–ಅಂಗಡಿಗಳ ಮುಂದೆ ಆಹಾರ ಪದಾರ್ಥಗಳನ್ನು ಎಸೆಯುವುದನ್ನು ತಪ್ಪಿಸಬೇಕು, ಕಸವನ್ನು ಕೇವಲ ನಿಗದಿತ ಸ್ಥಳಗಳಲ್ಲಿ ಮಾತ್ರ ಹಾಕಬೇಕು ಹಾಗೂ ಮಂಗಗಳ ಹಾವಳಿ ಕಂಡುಬಂದಲ್ಲಿ ತಕ್ಷಣವೇ ತಮ್ಮ ಸಮೀಪದ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಇತ್ತೀಚೆಗೆ ಗ್ರಾಮಗಳಲ್ಲಿ ಮಂಗಗಳ ಹಾವಳಿ ಅಧಿಕವಾಗಿ ಕಂಡುಬರುತ್ತಿದ್ದು, ಸಾರ್ವಜನಿಕರು ಅರಣ್ಯ ಇಲಾಖೆಯಿಂದ ನೀಡಿದ ಮೇಲ್ಕಂಡ ಸಲಹೆಗಳನ್ನು ಪಾಲಿಸಿ, ಮಂಗಗಳ ದಾಳಿ ತಡೆಯುವ ಕಾರ್ಯದಲ್ಲಿ ಭಾಗವಹಿಸಬೇಕು. ಇದರಿಂದ ಮಂಗಗಳು ತಮ್ಮ ಸ್ವಾಭಾವಿಕ ವಾಸ ಸ್ಥಾನದಲ್ಲಿ ಬದುಕಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.