×
Ad

ಕಲಬುರಗಿ | ಹೈ ಫ್ರೀಕ್ವೆನ್ಸಿ ಎಲೆಕ್ಟ್ರಾನಿಕ್ಸ್ ನಲ್ಲಿ ಶ್ರೇಷ್ಠತೆಯ ಕೇಂದ್ರಕ್ಕೆ ಸಿಯುಕೆ-ಕೀಸೈಟ್ ಟೆಕ್ನಾಲಜೀಸ್ ಶೈಕ್ಷಣಿಕ ಒಪ್ಪಂದ

Update: 2025-08-28 22:04 IST

ಕಲಬುರಗಿ: ಕಲಬುರಗಿಯ ಸಮೀಪದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಹಾಗೂ ಅಮೇರಿಕನ್ ಬಹುರಾಷ್ಟ್ರೀಯ ಕಂಪನಿ ಕೀಸೈಟ್ ಟೆಕ್ನಾಲಜೀಸ್ ನಡುವೆ ಹೈ ಫ್ರೀಕ್ವೆನ್ಸಿ ಎಲೆಕ್ಟ್ರಾನಿಕ್ಸ್ ನಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ನಿರ್ಮಿಸಲು ಮಹತ್ವದ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಯುಕೆಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು, “ಕೀಸೈಟ್ ಟೆಕ್ನಾಲಜಿ ಬೆಂಬಲದೊಂದಿಗೆ ಪ್ರಾರಂಭವಾಗುತ್ತಿರುವ ಈ ಕೇಂದ್ರ ಕೇವಲ ಆರಂಭ. ಮುಂದಿನ ದಿನಗಳಲ್ಲಿ ನಾವು ಕೃತಕ ಬುದ್ಧಿಮತ್ತೆ (ಎಐ), ರೊಬೊಟಿಕ್ಸ್ ಮತ್ತು ಯಂತ್ರ ಕಲಿಕಾ ಕೋರ್ಸುಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದೇವೆ. ತಂತ್ರಜ್ಞಾನವನ್ನು ಸಮಾಜಕ್ಕೆ ವರ್ಗಾಯಿಸುವುದು ನಮ್ಮ ಗುರಿ. ಇದರಿಂದ ರಾಷ್ಟ್ರದ ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು” ಎಂದರು.

“ಸಿಯುಕೆಯಲ್ಲಿ ಈಗಾಗಲೇ ಪ್ರತಿಭಾವಂತ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದಾರೆ. ಇದು ತಂತ್ರಜ್ಞಾನಗಳ ಅಭಿವೃದ್ಧಿಗೆ ದೊಡ್ಡ ಬಲ. ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುಕೂಲಕರ ವಾತಾವರಣ ಇಲ್ಲಿ ಲಭ್ಯವಿದೆ. ಕೇಂದ್ರದ ನಿರ್ಮಾಣಕ್ಕೆ ಭಾರತ ಸರ್ಕಾರ ಕಟ್ಟಡ ಮತ್ತು ಉಪಕರಣಗಳಿಗೆ ಅಗತ್ಯ ಅನುದಾನ ನೀಡುತ್ತಿದೆ” ಎಂದು ತಿಳಿಸಿದರು.

ಕೀಸೈಟ್ ಅಕಾಡೆಮಿಯಾದ ಜನರಲ್ ಮ್ಯಾನೇಜರ್ ಸ್ವಿಂದರ್ ಪುರಿ ಅವರು, “ಭಾರತ ಭವಿಷ್ಯದ ತಂತ್ರಜ್ಞಾನಗಳಲ್ಲಿ ಜಾಗತಿಕ ನಾಯಕನಾಗಲಿದೆ. ಈ ಪ್ರಯಾಣದಲ್ಲಿ ಕೀಸೈಟ್ ಪಾಲುದಾರರಾಗಿ ಕಾರ್ಯನಿರ್ವಹಿಸುವುದು ನಮ್ಮ ಹೆಮ್ಮೆ” ಎಂದರು.

ಮಲೇಷ್ಯಾದ ಕೀಸೈಟ್ ಗ್ಲೋಬಲ್‍ನ ಉಪಾಧ್ಯಕ್ಷ ಹಾನ್‍ಸಿಂಗ್ ಲಿಮ್, ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಅವರು ಮಾತನಾಡಿದರು.

ಡಾ. ರಾಜೀವ್ ಜೋಶಿ ಅವರು ಒಪ್ಪಂದದ ಮುಖ್ಯ ಉದ್ದೇಶವನ್ನು ವಿವರಿಸಿದರು.

ಕೀಸೈಟ್ ಟೆಕ್ನಾಲಜೀಸ್ ಈ ಸಂದರ್ಭದಲ್ಲಿ ಸಿಯುಕೆಗೆ 1.56 ಕೋಟಿ ಅನುದಾನ ಬಿಡುಗಡೆ ಮಾಡಿತು. ಇದು ಬೋಧನಾ-ಕಿಟ್ ಅಭಿವೃದ್ಧಿ ಘಟಕ ಮತ್ತು ಅಪ್‍ಸ್ಕಿಲ್ಲಿಂಗ್ ಕೇಂದ್ರ ಸ್ಥಾಪನೆಗೆ ಬಳಸಲಾಗಲಿದೆ.

ಕೇಂದ್ರದ ಸಂಯೋಜಕ ಡಾ.ವಿರೇಶ ಕಸ್ಬೆಗೌಡರ್ ಸ್ವಾಗತಿಸಿದರು. ಡಾ.ಭರತ್ ಕುಮಾರ್, ಡಾ.ಪರಮೇಶ, ಡಾ.ಪಾಂಡುರಂಗ ಪ್ರಸಾದ್, ಡಾ.ರಾಘವೈಹ್, ಡಾ.ಎ.ಎನ್.ವಿಜಯಕುಮಾರ್, ಹಣಕಾಸು ಅಧಿಕಾರಿ ರಾಮದೊರೈ ಹಾಗೂ ಇತರ ಅಧ್ಯಾಪಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News