×
Ad

ಕಲಬುರಗಿ | ಭೀಮಾ ನದಿಗೆ 2.50 ಲಕ್ಷ‌ ಕ್ಯೂಸೆಕ್ಸ್ ನೀರು ಬಿಡುಗಡೆ: ನದಿಪಾತ್ರದ ಜನರು ಎಚ್ಚರಿಕೆಯಂದಿರುವಂತೆ ಡಿ.ಸಿ ಬಿ.ಫೌಝಿಯಾ ತರನ್ನುಮ್ ಮನವಿ

Update: 2025-09-24 22:40 IST

ಕಲಬುರಗಿ : ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಮತ್ತು ಬೋರಿ ನದಿಯಿಂದ ಒಟ್ಟಾರೆ 2.50 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಗುರುವಾರ ಸಂಜೆ ಅಫಜಲಪುರ ತಾಲ್ಲೂಕಿನ ಸೊನ್ನಿ ಬ್ಯಾರೇಜಿಗೆ ತಲುಪಿದ ನೀರು ಒಳ ಹರಿವು ಹೆಚ್ಚಿಸಲಿದೆ. ನದಿ ದಂಡೆಯ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್‌ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಕಳೆದ ಶನಿವಾರ ಮತ್ತು ರವಿವಾರಗಳಲ್ಲಿ ಸತತ ಮಳೆಯಾದರೆ, ಭೀಮಾ ನದಿಗೆ ನೆರೆಯ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಮಾನವ ಮತ್ತು ಪ್ರಾಣಿ ಹಾನಿ ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

2025 ಜನವರಿಯಿಂದ ಸೆಪ್ಟೆಂಬರ್ ವರೆಗೆ ನಿಯಮಿತವಾಗಿ 609 ಮಿ.ಮೀ ಮಳೆ ಬರಬೇಕಾಗಿತ್ತು. ಆದರೇ, ಶೇ.48 ಹೆಚ್ಚಾಗಿ 900 ಮಿ.ಮೀ ಮಳೆ ದಾಖಲಾಗಿದೆ. ಆಗಸ್ಟ್‌ನಲ್ಲಿ ವಾಡಿಕೆಯ ಮಳೆಯಿಗಿಂತ ಶೇ.69 ಹೆಚ್ಚಿದೆ. ಸೆಪ್ಟೆಂಬರ್‌ನಲ್ಲಿ ಇದುವರೆಗೆ 241 ಮಿ.ಮೀ ಮಳೆ ದಾಖಲಾಗಿದೆ, ಇದು ಸಹ ಶೇ.43 ಹೆಚ್ಚಾಗಿದೆ. ಈ ಮಳೆಯೇ ಬೆಳೆ ಹಾನಿಗೆ ಪ್ರಮುಖ ಕಾರಣವಾಗಿದೆ ಎಂದರು.

ಸತತ ಮಳೆಯಿಂದ ಆಗಸ್ಟ್‌ನಲ್ಲಿ 1.05 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸೆಪ್ಟೆಂಬರ್‌ನಲ್ಲಿ ನಡೆಯುತ್ತಿರುವ ಮಳೆಯ ಕಾರಣ ಸಮೀಕ್ಷೆ ತಡವಾಗಿದೆ. 7 ತಾಲ್ಲೂಕಿನ ಸಮೀಕ್ಷೆ ಪೂರ್ಣಗೊಂಡಿದ್ದು, ಉಳಿದ 4 ತಾಲ್ಲೂಕಿನ ವರದಿ ಕೂಡ ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು. 2025ರ ಮುಂಗಾರು ಹಂಗಾಮಿನಲ್ಲಿ 3.01 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿದ್ದು, 1.78 ಲಕ್ಷ ಪ್ರಕರಣಗಳು ಸ್ಥಳೀಯ ವಿಕೋಪದಡಿ ದಾಖಲಾಗಿದೆ. ಸರ್ಕಾರ ಶೀಘ್ರದಲ್ಲೇ ಪರಿಹಾರ ನೀಡಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದರು.

ಪ್ರವಾಹದಿಂದ ತೊಂದರೆ ಉಂಟಾಗುವ 153 ಗ್ರಾಮಗಳಲ್ಲಿ 90 ಸ್ಥಳಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಗುರುತಿಸಲಾಗಿದೆ. ಈಗಾಗಲೆ 7 ಕಾಳಜಿ ಕೇಂದ್ರ ತೆರೆಯಲಾಗಿದೆ. ಪ್ರಾಣಿಗಳಿಗಾಗಿ ತಾತ್ಕಾಲಿಕ 40 ಗೋಶಾಲೆ ತೆರೆಯಲು ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

2025–26ನೇ ಸಾಲಿನಲ್ಲಿ ಸಿಡಿಲು, ಮನೆ ಕುಸಿತ ಮತ್ತು ನೀರಿನಲ್ಲಿ ಕೊಚ್ಚಿಹೋದ ಪ್ರಕರಣಗಳಲ್ಲಿ 8 ಜನ ಮೃತರಾಗಿದ್ದು, ತಲಾ 5 ಲಕ್ಷ ರೂ. ಮತ್ತು ಒಟ್ಟು 40 ಲಕ್ಷ ರೂ. ಪರಿಹಾರ ಸಂತ್ರಸ್ತರಿಗೆ ನೀಡಲಾಗಿದೆ. 103 ಪ್ರಾಣಿಗಳ ಹಾನಿಗೆ 18 ಲಕ್ಷ ರೂ., 753 ಭಾಗಶಃ ಮನೆ ಹಾನಿಗೆ 53.67 ಲಕ್ಷ ರೂ., ಮನೆಗಳಿಗೆ ನೀರು ನುಗ್ಗಿ ಮನೆ ದೈನಂದಿನ ವಸ್ತು ಹಾನಿಗೆ 84.60 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೆಲಸಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದರು.

ಪ್ರವಾಹ ಪರಿಸ್ಥಿತಿಯಲ್ಲಿ ನದಿಯಲ್ಲಿ ಈಜುವುದನ್ನು, ಸೆಲ್ಫಿ ತೆಗೆಯುವುದನ್ನು, ನದಿ ದಂಡೆಗೆ ಬಟ್ಟೆ ಒಗೆಯುವುದನ್ನು, ಕುರಿ-ಆಕಲು ಮೇಯಿಸಲು ಅಥವಾ ಮೀನು ಹಿಡಿಯಲು ಹೋಗುವುದನ್ನು ತಪ್ಪಿಸಿ. ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸಬೇಡಿ. ಪ್ರವಾಸಿಗರು ಪ್ರವಾಸ ಮುಂದೂಡಿದರೆ ಉತ್ತಮ ಎಂದು ಅವರು ಮನವಿ ಮಾಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News