ಕಲಬುರಗಿ | ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ : ಹೆಸರು ನೊಂದಣಿಗೆ ಅರ್ಜಿ ಸಲ್ಲಿಸಲು ನ.6 ಕೊನೆಯ ದಿನ: ಝಹೀರಾ ನಸೀಮ್
ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ನ.1ರ, 2025ಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದ್ದು, ಅರ್ಹ ಮತದಾರರು ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನ.6 ಕೊನೆಯ ದಿನವಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್ ತಿಳಿಸಿದ್ದಾರೆ.
ಮತದಾರರ ಪರಿಷ್ಕರಣೆ ಭಾಗವಾಗಿ ಕರಡು ಮತದಾರರ ಪಟ್ಟಿಯನ್ನು ನ.25 ರಂದು ಪ್ರಕಟಿಸಿ ಡಿ.10 ರೊಳಗೆ ಆಕ್ಷೇಪಣೆ ಅಹ್ವಾನಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು 2025ರ ಡಿ.30 ರಂದು ಪ್ರಕಟಿಸಲಾಗುತ್ತದೆ ಎಂದು ಮತದಾರರ ಪರಿಷ್ಕರಣೆ ಕಾರ್ಯದ ಬಗ್ಗೆ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷೇತ್ರಕ್ಕೆ ಪ್ರಾದೇಶಿಕ ಆಯುಕ್ತರು ಮತದಾರರ ನೋಂದಣಾಧಿಕಾರಿಯನ್ನಾಗಿ ಹಾಗೂ ಚುನಾವಣಾ ಕ್ಷೇತ್ರ ವ್ಯಾಪ್ತಿಗೊಳಪಡುವ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲಾಧಿಕಾರಿಗಳು, ಕಲಬುರಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರು, ವಿಭಾಗದ ಎಲ್ಲಾ ಸಹಾಯಕ ಆಯುಕ್ತರು, ತಹಶೀಲ್ದಾರರು ಸಹಾಯಕ ಮತದಾರರ ನೊಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಈ ಕಚೇರಿಗಳಿಗೆ ಕಾಲಮಿತಿಯಲ್ಲಿ ಅರ್ಜಿ, ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದರು ಸಹ ಇದೀಗ ಪುನ: ನಮೂನೆ-19ರಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಹ ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಸುಭದ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಮತದಾರರ ನೋಂದಣಾಧಿಕಾರಿ ಜಹೀರಾ ನಸೀಮ ಅವರು ಮನವಿ ಮಾಡಿದ್ದಾರೆ.
ಹೆಸರು ಸೇರಿಸಲು ಅರ್ಹತೆ ಏನು? :
ಭಾರತದ ಪ್ರಜೆಯಾಗಿರುವ ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿರುವ ಹಾಗೂ 1ನೇ ನವೆಂಬರ್ 2025 ಕ್ಕೆ ಮೊದಲ 6 ವಷಗಳ ಅವಧಿಯಲ್ಲಿ ಸೆಕೆಂಡರಿ ದರ್ಜೆಯಲ್ಲಿ ಪ್ರೌಢ ಶಾಲೆಗಿಂತ ಕಡಿಮೆ ಇಲ್ಲದ ನಿರ್ಧಿಷ್ಟ ಪಡಿಸಿದಂತಹ ರಾಜ್ಯದೊಳಗಿನ ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಟ್ಟು ಕನಿಷ್ಠ 3 ವರ್ಷ ಬೋಧನಾ ವೃತ್ತಿಯಲ್ಲಿ ನಿರತವಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ.
ಹೀಗಾಗಿ ಅರ್ಜಿಯೊಂದಿಗೆ ಅಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಬಿಳಿ ಬಣ್ಣದ ಹಿನ್ನೆಲೆ ಹೊಂದಿದ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಶೈಕ್ಷಣಿಕ ಸಂಸ್ಥೆಗಳಿಂದ ಅನುಬಂಧ-2ರಲ್ಲಿ ಸಂಬಳ ಬಟವಾಡೆ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ ಲಗತ್ತಿಸಬೇಕು. ಮತದಾರ ಪಟ್ಟಿಗೆ ಹೆಸರು ಸೇರಿಸಲು ಬಯಸುವ ವ್ಯಕ್ತಿ ಕಾರ್ಯನಿರ್ವಹಿಸುವ ಸ್ಥಳ ಬದಲಾಗಿ ಸಾಮಾನ್ಯ ನಿವಾಸಿಯಾಗಿ ವಾಸಿಸುತ್ತಿರುವ ಸ್ಥಳೀಯ ಕ್ಷೇತ್ರದಲ್ಲಿ ಹೆಸರು ನೊಂದಾಯಿಸಬಹುದಾಗಿದೆ.
ಬಲ್ಕ್ ಅರ್ಜಿ ಸ್ವೀಕರಿಸಲ್ಲ :
ಖುದ್ದಾಗಿ ಅಥವಾ ಅಂಚೆ ಮುಖಾಂತರ ಒಟ್ಟಾರೆಯಾಗಿ ಸಲ್ಲಿಸಿದ ಅರ್ಜಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಪರಿಗಣಿಸುವುದಿಲ್ಲ. ಆದರೆ ಸಂಸ್ಥೆಯ ಮುಖ್ಯಸ್ಥರು ಸಿಬ್ಬಂದಿಗಳ ಅರ್ಜಿಗಳನ್ನು ಮತದಾರರ ನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದು. ಬಲ್ಕ್ (ಗುಚ್ಚದ) ರುಪದಲ್ಲಿ ಅರ್ಜಿ ಸ್ವೀಕರಿಸಲ್ಲ. ಕುಟಂಬದ ಎಲ್ಲಾ ಸದಸ್ಯರ ಅರ್ಜಿಗಳನ್ನು ಕುಟುಂಬ ಯಾರಾದರು ಒಬ್ಬ ಸದಸ್ಯರು ಸಲ್ಲಿಸಬಹುದಾಗಿದೆ. ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದಲ್ಲಿ ಪ್ರಜಾಪ್ರಾತಿನಿಧ್ಯ ಅಧಿನಿಯಮ-1950ರ 31 ನೇ ಪ್ರಕರಣದ ಮೇರೆಗೆ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.