ಕಲಬುರಗಿ : ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸಿದ ಸುದೀರ್ಘ ಹೋರಾಟಕ್ಕೆ ಕೊನೆಗೂ ಸ್ಪಂದನೆ ದೊರೆತಿದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ಶನಿವಾರ ತಡರಾತ್ರಿಯವರೆಗೆ ನಡೆದ ಐದನೇ ಸುತ್ತಿನ ಸಭೆಯಲ್ಲಿ ಜಿಲ್ಲೆಯ ಐದೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಪ್ರತಿ ಟನ್ ಕಬ್ಬಿಗೆ 3,500 ಬೆಲೆ ನೀಡಲು ಒಪ್ಪಿಗೆ ಸೂಚಿಸಿವೆ. ಅಲ್ಲದೆ, ಸಕ್ಕರೆ ದರದ ಆಧಾರದ ಮೇಲೆ ಹೆಚ್ಚುವರಿಯಾಗಿ 100 ನೀಡುವ ಒಪ್ಪಂದವೂ ಆಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ರೈತ ಸಂಘಟನೆಗಳ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆಯಿತು. ಬೆಳಗಿನ ಮೊದಲ ಸುತ್ತು ಹಾಗೂ ಮಧ್ಯಾಹ್ನದ ಎರಡನೇ ಸುತ್ತಿನ ಸಭೆಯಲ್ಲೂ ದರ ನಿಗದಿ ಕುರಿತು ಒಮ್ಮತ ಮೂಡಿರಲಿಲ್ಲ. ಆರಂಭದಲ್ಲಿ ಪ್ರತಿ ಟನ್‌ಗೆ ₹3,450 ನೀಡಲು ಕಾರ್ಖಾನೆಗಳು ಸಮ್ಮತಿಸಿದ್ದವು. ಸಕ್ಕರೆಯ ಮಾರುಕಟ್ಟೆ ದರ ಪ್ರತಿ ಕೆ.ಜಿ.ಗೆ ₹50 ಮೀರಿದರೆ ಲಾಭಾಂಶ ಹಂಚಿಕೆಯಡಿ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ₹150 ನೀಡುವ ಪ್ರಸ್ತಾವವನ್ನೂ ಮುಂದಿಟ್ಟಿದ್ದವು.

ಆದರೆ, ಈ ಪ್ರಸ್ತಾವಕ್ಕೆ ತೃಪ್ತರಾಗದ ರೈತರು ₹3,600ಕ್ಕಿಂತ ಕಡಿಮೆ ದರಕ್ಕೆ ಒಪ್ಪುವುದಿಲ್ಲ ಎಂದು ಪಟ್ಟುಹಿಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಾದ ಚೊನ್ನಪ್ಪ ಪೂಜಾರಿ ಮತ್ತು ಶಶಿಕಾಂತ ಗುರುಜಿ ನೇತೃತ್ವದಲ್ಲಿ ಅಫಜಲಪುರ ತಾಲೂಕಿನ ಚೌಡಾಪುರ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ರೈತರು ಟ್ರ್ಯಾಕ್ಟರ್, ಕ್ರೂಸರ್ ಹಾಗೂ ಬೈಕ್‌ಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ಮುಂದುವರಿಸಿದರು.

ರಾತ್ರಿ 11.30ರವರೆಗೂ ನಡೆದ ಮಾತುಕತೆ ಹಾಗೂ ತೀವ್ರ ಚರ್ಚೆಯ ಬಳಿಕ ಅಂತಿಮವಾಗಿ ಪ್ರತಿ ಟನ್ ಕಬ್ಬಿಗೆ ₹3,500 ಮೂಲ ದರ ಮತ್ತು ಹೆಚ್ಚುವರಿಯಾಗಿ ₹100 ನೀಡಲು ಕಾರ್ಖಾನೆಗಳ ಆಡಳಿತ ಮಂಡಳಿಗಳು ಒಪ್ಪಿಗೆ ಸೂಚಿಸಿದವು. ಇದರಿಂದ ಹಲವು ಗಂಟೆಗಳ ಕಾಲ ಮುಂದುವರಿದ ರೈತರ ಧರಣಿ ಅಂತ್ಯಗೊಂಡಿತು.

ಕಬ್ಬಿನ ಬೆಲೆ ಹೆಚ್ಚಳಕ್ಕಾಗಿ ರೈತರು ನಡೆಸಿದ ಹೋರಾಟಕ್ಕೆ ಈ ಒಪ್ಪಂದದಿಂದ ಫಲ ದೊರೆತಂತಾಗಿದ್ದು, ರೈತ ಸಂಘಟನೆಗಳ ಮುಖಂಡರು ಹಾಗೂ ಬೆಳೆಗಾರರಲ್ಲಿ ಸಂತಸ ಮೂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor