×
Ad

ಕಲಬುರಗಿ | ಪುರುಷನ ಯಶಸ್ವಿ ಶಕ್ತಿ ಸ್ವರೂಪವೇ ಮಹಿಳೆ : ಶಶೀಲ್ ನಮೋಶಿ

Update: 2025-03-08 21:23 IST

ಕಲಬುರಗಿ : ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದಾಳೆ ಎಂಬುದನ್ನು ಇತಿಹಾಸದ ಪುಟಗಳನ್ನು ತೆಗೆದಾಗ ಸಾಕಷ್ಟು ಉದಾಹರಣೆಗಳನ್ನು ನೋಡಬಹುದಾಗಿದೆ. ಆಧುನಿಕ ವ್ಯವಸ್ಥೆಯಲ್ಲಿ ಮಹಿಳೆಯರು ಗಡಿ ಕಾಯುವ ಸೈನಿಕ ಹುದ್ದೆಯಿಂದ, ವಿಮಾನ ನಡೆಸುವ ಪೈಲಟ್ ಸೇರಿ ದೇಶದ ರಾಷ್ಟ್ರಪತಿಯಾಗಿಯೂ ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಹೇಳಿದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದು ಎಐ ಯುಗ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆ, ಬೆಳವಣಿಗೆ ಎಂಬುದು ವರ್ಷದಿಂದ ವರ್ಷಕ್ಕೆ, ದಿನದಿಂದ ದಿನಕ್ಕೆ ಆಗುತ್ತಿದೆ. ತಂತ್ರಜ್ಞಾನ ಮಾನವ ಕೆಲಸವನ್ನು ಎಷ್ಟು ಬೇಕೋ ಅಷ್ಟು ಮಟ್ಟಕ್ಕೆ ಕಡಿಮೆ ಮಾಡಿಸುವಂತಹ ಎಲ್ಲ ವಿಧಾನವನ್ನು ಕಂಡುಕೊಳ್ಳುತ್ತಿದ್ದಾರೆ. ತಂತ್ರಜ್ಞಾನ ಎಷ್ಟೇ ಅತ್ಯಾಧುನಿಕವಾದರೂ, ಏನೆ ಹೊಸತನ ತಂದರೂ ಸಹ ಸಮಾಜದಲ್ಲಿಯ ಹಲವು ಕೊಡುಗೆಗಳು ಇತಿಹಾಸಿಕ ಸಂಗತಿಗಳನ್ನು ಎಂದಿಗೂ ಮರೆಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಎಲ್ಲಾ ದೇಶಗಳು ಅಭಿವೃದ್ಧಿಯ ಪಥದಲ್ಲಿ ತಾವು ಮುಂಚೂಣಿಯಲ್ಲಿರಬೇಕು ಎಂದು ಬಯಸುತ್ತಿರುವ ಈ ಸಂದರ್ಭದಲ್ಲಿ, ತಂತ್ರಜ್ಞಾನ, ಆವಿಷ್ಕಾರಗಳೊಂದಿಗೆ ಅನ್ಯಗ್ರಹದಲ್ಲಿ ವಾಸಿಸಲು ಯೋಗ್ಯ ಸ್ಥಳವನ್ನು ಹುಡುಕುತ್ತಿರುವ ಪ್ರಯತ್ನಗಳ ಸಂದರ್ಭದಲ್ಲಿ ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸಲು, ಗೌರವಿಸಲು ಈ ದಿನವನ್ನು ಅವರಿಗೆ ಮೀಸಲಿರಿಸಲಾಗಿದೆ ಎಂದರು.

ಅಂತರರಾಷ್ಟ್ರೀಯ ಮಹಿಳೆಯರ ದಿನ'ವನ್ನು ಪ್ರಥಮ ಬಾರಿಗೆ ಕೂಲಿ ಚಳುವಳಿಯ ಮೂಲಕ ಉತ್ತರ ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಆರಂಭಿಸಲಾಯಿತು. ಮಹಿಳಾ ದಿನೋತ್ಸವದ ಮುಖೇನ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಸಾರಲು ಈ ದಿನ ಒಂದು ದೊಡ್ಡ ವೇದಿಕೆ ಆಗಿರುತ್ತದೆ. ಪ್ರಪಂಚಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ಸ್ಮರಿಸಿ, ಮೇಲುಕು ಹಾಕುವ ದಿನವಿದು. 1975 ರ ಮಾ.8 ರ 'ಅಂತರರಾಷ್ಟ್ರೀಯ ಮಹಿಳಾ ದಿನ'ದಿಂದ ಸಂಯುಕ್ತ ರಾಷ್ಟ್ರಗಳು ಸಹ ಮಹಿಳಾ ದಿನವನ್ನ ಆಚರಿಸಲು ಮುಂದಾದವು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ.ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್, ಆಡಳಿತ ಮಂಡಳಿ ಸದಸ್ಯರು ಹಾಗೂ ಬಸವೇಶ್ವರ ಆಸ್ಪತ್ರೆಯ ಸಂಚಾಲಕರಾದ ಡಾ.ಕಿರಣ್ ದೇಶಮುಖ್, ಡಾ ಶರಣಬಸಪ್ಪ ಹರವಾಳ,ಡಾ.ಅನಿಲಕುಮಾರ ಪಟ್ಟಣ, ಡಾ ಶಿವಾನಂದ ಮೇಳಕುಂದಿ,ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆನಂದ ಗಾರಂಪಳ್ಳಿ, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಶರಣಗೌಡ ಪಾಟೀಲ್, ಡಾ.ಎಂ ಆರ್ ಪೂಜಾರಿ ವೈದ್ಯರಾದ ಡಾ. ರೂಪಾ ಮಂಗಶೆಟ್ಟಿ,ಡಾ ಮೀನಾಕ್ಷಿ ದೇವರಮನಿ, ಡಾ.ಪ್ರತಿಮಾ ಕಾಮರೆಡ್ಡಿ,ಡಾ.ಮಹದಾನಂದ ಮೇಳಕುಂದಿ, ಡಾ.ವಿಜಯಶ್ರೀ ಮಠದ, ಡಾ.ಭುವನೇಶ್ವರಿ, ಸಿಸ್ಟರ್ ಲೀನಾ, ಸುಮತಿ ಉಪಸ್ಥಿತರಿದ್ದರು. ಸಮಾರಂಭವನ್ನು ಡಾ. ಆರುಂಧತಿ ಪಾಟೀಲ್ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News