×
Ad

ಕಲಬುರಗಿ | ತೊಗರಿ ಬೆಳೆಯಲ್ಲಿ ಗೊಡ್ಡು ರೋಗದ ನಿರ್ವಹಣೆಗೆ ಕೃಷಿ ವಿಜ್ಞಾನಿಯಿಂದ ರೈತರಿಗೆ ಸಲಹೆ

Update: 2025-10-29 18:23 IST

ಕಲಬುರಗಿ : ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ವರ್ಷದ ತೊಗರಿ ಬೆಳೆಯಲ್ಲಿ ಅತೀಯಾದ ಮಳೆಯಿಂದಾಗಿ ಹಲವು ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಕಲಬುರಗಿ ವಲಯ ಕೃಷಿ ಸಂಶೋಧನಾ ಕೇಂದ್ರದ (ಸಸ್ಯ ರೋಗಶಾಸ್ತ್ರ) ಹಿರಿಯ ವಿಜ್ಞಾನಿಗಳಾದ ಮಲ್ಲಿಕಾರ್ಜುನ ಕೆಂಗನಾಳ್ ರೈತರಿಗೆ ಮಹತ್ವದ ಸಲಹೆ ಸೂಚನೆಗಳು ನೀಡಿದ್ದಾರೆ.

ಸತತವಾದ ಮಳೆಯಿಂದಾಗಿ ಮಣ್ಣಿನಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿ ನೀರಾವರಿ ಬೆಳೆಗಳಾದ ಹತ್ತಿ ಮತ್ತು ಕಬ್ಬು ಬೆಳೆಗಳು ಸುತ್ತುವರೆದಿರುವ ತೊಗರಿ ಬೆಳೆಯ ಹೊಲಗಳಲ್ಲಿ ಗೊಡ್ಡು ರೋಗದ ಬಾಧೆ ಹೆಚ್ಚಾಗಿ ಕಂಡುಬರುತ್ತಿದೆ. ಸಾಮಾನ್ಯವಾಗಿ ತೊಗರಿ ಬಿತ್ತನೆಯ ಪೂರ್ವ ಕಳೆದ ವರ್ಷದಲ್ಲಿ ಗೊಡ್ಡು ರೋಗದ ಬಾಧೆಗೆ ತುತ್ತಾಗಿರುವ ತೊಗರಿ ಗಿಡಗಳು ಹಾಗೂ ಅವುಗಳ ಕುಳೆ ಗಿಡಗಳು ಹೊಲಗಳಲ್ಲಿ ಅಥವಾ ಬದುಗಳ ಮೇಲೆ ಅಥವಾ ತಾನಾಗಿಯೇ ಬೆಳೆದುಕೊಂಡು ಗೊಡ್ಡು ರೋಗದ ಬಾಧೆಗೆ ತುತ್ತಾಗಿ ಕೆಲೆವೊಂದು ಗಿಡಗಳು ಉಳಿದುಕೊಂಡಿರುತ್ತವೆ. ಅಂತಹ ಹೊಲಗಳಲ್ಲಿ ಈ ವರ್ಷ ಮತ್ತೆ ತೊಗರಿ ಬೆಳೆಯನ್ನು ಬಿತ್ತನೆ ಮಾಡಿದಾಗ ಗೊಡ್ಡು ರೋಗದ ಬಾಧೆ ಮೈಟ ನುಶಿಗಳ ಮೂಲಕ ಬಾಧಿತ ಗಿಡಗಳಿಂದ ಹೊಸದಾಗಿ ಬಿತ್ತನೆ ಮಾಡಿದ ಆರೋಗ್ಯಯುತವಾದ ಬೆಳೆಗೆ ಹರಡುತ್ತದೆ ಎಂದು ತಿಳಿಸಿದ್ದಾರೆ.

ಈ ವರ್ಷದಲ್ಲಿ ಅತೀಯಾದ ಮಳೆಯಿಂದಾಗಿ ತೊಗರಿ ಬೆಳೆಯುವ ಬಹುತೇಕ ಪ್ರದೇಶಗಳ ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದ ಆದ್ಯತೆ (ಶೇ.70 ಕ್ಕಿಂತ ಹೆಚ್ಚು) ಇರುವದರಿಂದ ಹಾಗೂ 25 ರಿಂದ 32 ಡಿಗ್ರೀ ಸೆಲ್ಸಿಯಸ್ ಉಷ್ಣತೆಯಿಂದಾಗಿ ಮೈಟ ನುಶಿಗಳ ಪ್ರಜನನ ಕ್ರೀಯೆಗೆ ಹೆಚ್ಚು ವ್ಯಾಪಕವಾಗಿದೆ. ಇದರಿಂದ ಅವುಗಳ ಸಂಖ್ಯೆ ಪ್ರತಿ 10 ರಿಂದ 12 ದಿನಗಳಲ್ಲಿ ಒಂದು ಜೀವನ ಚಕ್ರ ಪೂರ್ಣಗೊಳಿಸುವ ಕ್ಷಮತೆ ಹೊಂದಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ ಹೇಳಿದ್ದಾರೆ.

ಪೂರಕವಾದ ವಾತಾವರಣ ನಿರ್ಮಾಣವಾಗಿ ಅವುಗಳ ಸಂಖ್ಯೆ ಹೆಚ್ಚಾಗಿ ಹೆಚ್ಚಿನ ಪ್ರಮಾಣದಲ್ಲಿ ರೋಗ ಹರಡಲು ಕಾರಣವಾಗಿರುತ್ತದೆ. ರೋಗ ಬಾಧಿತ ತೊಗರಿ ಗಿಡದಿಂದ ಮೈಟ ನುಶಿಗಳು ಆರೋಗ್ಯವಾಗಿರುವ ಪಕ್ಕದ ಗಿಡಕ್ಕೆ ಎಲೆಗಳು ತಗುಲಿದಾಗ ಮತ್ತು ಕೆಲವೊಮ್ಮೆ ವೇಗವಾದ ಗಾಳಿಯು ಬೀಸಿದಾಗ ನುಶಿಗಳು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುವದರಿಂದ ಅವುಗಳೊಂದಿಗೆ ರೋಗವು ಹರಡಲು ಕಾರಣವಾಗಿರುತ್ತದೆ ಎಂದಿದ್ದಾರೆ.

ಗೊಡ್ಡು ರೋಗದ ಲಕ್ಷಣಗಳು :

ಬಾಧಿತ ಗಿಡದ ಎಲೆಗಳು ತೆಳು ಹಳದಿ ಮತ್ತು ಹಸಿರು ಮಿಶ್ರಿತ ಬಣ್ಣದ ಎಲೆಗಳಿಂದ ಕೂಡಿದ್ದು, ಮ್ಯೋಸಾಯಿಕ್ ತರಹ ಕಂಡು ಬರುತ್ತವೆ. ಪ್ರಾರಂಭಿಕ ಹಂತದಲ್ಲಿ ಗಿಡದ ಕೆಲವು ಟೊಂಗೆಗಳಲ್ಲಿ ಲಕ್ಷಣ ಕಂಡು ಕ್ರಮೇಣ ಗಿಡದ ಎಲ್ಲ ಭಾಗಗಳಿಗೆ ಆವರಿಸುತ್ತದೆ. ಹೊಸದಾಗಿ ಹುಟ್ಟಿಕೊಳ್ಳುವ ಎಲೆಗಳು ಗಾತ್ರದಲ್ಲಿ ಸಣ್ಣದಾಗಿದ್ದು, ಗಿಡದ ಬೆಳವಣಿಗೆ ಕುಂಟಿತಗೊoಡು ಕುಬ್ಜವಾಗಿರುತ್ತದೆ. ಬಾದಿತ ಗಿಡದಲ್ಲಿ ಯಾವುದೇ ತರಹದ ಹೂವು ಮತ್ತು ಮೊಗ್ಗುಗಳು ಇರುವುದಿಲ್ಲ. ಕಾಯಿಗಳು ಕಟ್ಟದೆ ಗಿಡವು ಸಂಪೂರ್ಣವಾಗಿ ಗೊಡ್ಡಾಗಿರುತ್ತದೆ.

ರೋಗದ ನಿರ್ವಹಣೆ :

ತೊಗರಿ ಬೆಳೆಯುವ ರೈತರು ಮೈಟ ನುಶಿಯ ಬಾಧೆ ಬಾರದಂತೆ ಮುಂಜಾಗೃತ ಕ್ರಮವಾಗಿ ನೀರಿನಲ್ಲಿ ಕರಗು ಗಂಧಕದ ಪುಡಿಯನ್ನು ಪ್ರತಿ ಲೀಟರ ನೀರಿಗೆ ೩ ಗ್ರಾಂ ಬೆರಸಿ ಸಿಂಪರಣೆ ಮಾಡಬೇಕು. ಪ್ರತಿ ನೂರು ಗಿಡಗಳಲ್ಲಿ ಒಂದು ಅಥವಾ ಎರಡು ಬಾಧಿತ ಗಿಡಗಳು ಕಂಡಾಗ ಕೂಡಲೆ ಅವುಗಳನ್ನು ಕಿತ್ತಿ ನಾಶಪಡಿಸಿ ರೋಗ ಹರಡದಂತೆ ಕ್ರಮ ವಹಿಸಬೇಕು. ಸಾಧ್ಯವಾದಷ್ಟು ರೋಗ ತಗುಲಿದ ಗಿಡಗಳನ್ನು ಕಿತ್ತಿ ನಾಶಪಡಿಸುವದರಿಂದ ರೋಗದ ಬಾಧೆ ಹರಡದಂತೆ ತಡೆಗಟ್ಟಬಹುದು. ರೋಗ ಕಂಡಿರುವ ಹೊಲಗಳಲ್ಲಿ ಬಾಧಿತ ಗಿಡಗಳನ್ನು ಬೇರ್ಪಡಿಸಿ ಬೆಳೆಗೆ ಮೈಟನುಶಿ ನಾಶಕಗಳಾದ 1.5 ಮಿಲಿ ಆಕ್ಸಿಡೆಮೆಟಾನ 50 ಇ.ಸಿ. ಅಥವಾ 1.0 ಮಿಲಿ ಪ್ರೊಪರೇಗಟ್‌ 57 ಇ.ಸಿ. ಅಥವಾ 1.5 ಮಿಲಿ ಮಿಲಿ ಫೆನಾಝೀಕ್ವೀನ 10 ಇ.ಸಿ ಅಥವಾ 1.0 ಮಿಲಿ ಸ್ಪೆರೋಮೆಸಿಫಿನ್ 22.9 ಇ.ಸಿ ಅಥವಾ 1 ಮಿಲಿ ಅಬಾಮೆಕ್ಟಿನ್ 1.9 ಇ.ಸಿ. ಕೀಟನಾಶಕಗಳಲ್ಲಿ ಯಾವುದಾದರು ಒಂದನ್ನು 10 ರಿಂದ 12 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪರಣೆ ಮಾಡುವದರಿಂದ ಮೈಟ ನುಶಿಗಳ ನಿರ್ವಹಣೆ ಮಾಡಿ ರೋಗದ ಬಾಧೆಯನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದ್ದಾರೆ.

ರೈತರು ಬೆಳೆ ಕಟಾವು ಮಾಡಿದ ನಂತರ ಯಾವುದೇ ರೋಗ ಬಾಧಿತ ತೊಗರಿ ಗಿಡಗಳನ್ನು ಹೊಲದಲ್ಲಿ ಬಿಡಬಾರದು. ಅವುಗಳನ್ನು ಉಳುಮೆ ಮಾಡಿದ ನಂತರ ತೆಗೆದು ನಾಶಪಡಿಸಬೇಕು. ಅದರಲ್ಲೂ ಗೊಡ್ಡು ಹಾಗೂ ಬುಡಕೊಳೆ ರೋಗ ಬಾಧಿತ ಗಿಡಗಳನ್ನು ಬೇರ್ಪಡಿಸಿ ನಾಶಪಡಿಸಬೇಕು. ಇಲ್ಲವಾದಲ್ಲಿ ಇಂತಹ ಗಿಡಗಳು ಮುಂದಿನ ಹಂಗಾಮಿನಲ್ಲಿ ಮತ್ತೆ ರೋಗ ಹರಡಲು ಕಾರಣವಾಗುತ್ತವೆ. ಇದೇ ಕಾರಣದಿಂದಾಗಿ ತೊಗರಿ ಬೆಳೆಯಲ್ಲಿ ಕುಳೆ ಬೆಳೆಯನ್ನು ನಿಷೇಧಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ವಲಯ ಕೃಷಿ ಸಂಧೋನಾ ಕೇಂದ್ರ, ಕಲಬುರಗಿ ಅಥವಾ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ, ರದ್ದೇವಾಡಗಿ ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News