×
Ad

ಕಲಬುರಗಿ | ಸಮಸ್ಯಾತ್ಮಕ ರೈತರ ಕ್ಷೇತ್ರಗಳಿಗೆ ಕೃಷಿ ವಿಜ್ಞಾನಿಗಳ ಭೇಟಿ

Update: 2025-08-26 21:29 IST

ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿಯ ಮುಖ್ಯಸ್ಥರು ಹಾಗೂ ವಿಜ್ಞಾನಿಗಳ ತಂಡ ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು.

ಕೊಳಕೂರು, ರದ್ದೇವಾಡ್ಗಿ, ಹಂದನೂರು, ಬಣಮಗಿ ಮುಂತಾದ ಗ್ರಾಮಗಳ ಸಮಸ್ಯಾತ್ಮಕ ಕ್ಷೇತ್ರಗಳಿಗೆ ಭೇಟಿ ನೀಡಿ ಹೆಚ್ಚಾಗಿ ಮಳೆ ಆಗಿರುವುದರಿಂದ ತೊಗರಿ ಮತ್ತು ಹತ್ತಿ ಬೆಳೆಗಳಲ್ಲಿ ಹಲವಾರು ಸಮಸ್ಯೆಗಳನ್ನು ಕಂಡಿದ್ದು, ಅದರಲ್ಲಿ ವಿಶೇಷವಾಗಿ ಹತ್ತಿಯಲ್ಲಿ ಮೇಗ್ನಿಷಿಯಂ ಪೊಷಕಾಂಶದ ಕೊರತೆ, ರಸಹೀರುವ ಕೀಟಗಳ ಹಾವಳಿ ಕಂಡು ಬಂದಿದೆ. ಅದರ ನಿರ್ವಹಣೆಗಾಗಿ ಮೇಗ್ನಿಷಿಯಂ ಸಲ್ಫೇಟನ್ನು 10ಗ್ರಾಂ ಪ್ರತಿ ಲೀಟರ ನೀರಿನ ಜೊತೆಗೆ 19:19:19 ರಸಗೊಬ್ಬರವನ್ನು 10ಗ್ರಾಂ ಪ್ರತಿ ಲೀಟರ ನೀರಿಗೆ ಮತ್ತು ಥೈಯೊಮಿಥಾಕ್ಸಿಯಮ್ 0.3 ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಅದೇ ತರಹ ತೊಗರಿ ಬೆಳೆಯಲ್ಲಿ ಹಳದಿ ಬಣ್ಣಕ್ಕೆ ತಿರುಗಿರುವುದು ಹಾಗೂ ನೆಟೆರೋಗ ಕಂಡು ಬಂದಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದರು.

ನಿರ್ವಹಣೆಗಾಗಿ ಹೊಲದಲ್ಲಿ ನಿಂತಿರುವ ನೀರನ್ನು ಬಸಿವೆಗಾಲುವೆ ಮಾಡುವುದರ ಮುಖಾಂತರ ನೀರನ್ನು ಹೊರಗೆ ಹಾಕಲು ಸೂಚಿಸಿ ನಂತರ ಬೆಳೆಗಳಿಗೆ ಕಾರ್ಬಂಡೈಜಿಮ್ + ಮ್ಯಾಂಕೊಜೇಬ ಸಂಯುಕ್ತ ಶೀಲಿಂದ್ರನಾಶಕ 3 ಗ್ರಾಂ ಪ್ರತಿ ಲೀಟರ ನೀರಿಗೆ ಮತ್ತು 19:19:19 10ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿ ತೊಗರಿ ಬಡ್ಡೆ ಭಾಗ ತೊಯುವಂತೆ ಸಿಂಪರಣೆ ಮಾಡಲು ತಿಳಿಹೇಳಿದರು.

ಕ್ಷೇತ್ರ ಭೇಟಿ ಸಮಯದಲ್ಲಿ ವಿವಿಧ ಗ್ರಾಮದ ರೈತರುಗಳಾದ ಮರೆಪ್ಪ ಪೂಜಾರಿ, ಯಶವಂತ ಕೊಳಕೂರ, ಮಲ್ಲಪ್ಪಾ ಪೂಜಾರಿ ಹಾಗೂ ಕೇಂದ್ರದ ಮುಖ್ಯಸ್ಥರಾದ ಡಾ. ಪಿ. ವಾಸುದೇವ ನಾಯ್ಕ, ವಿಜ್ಞಾನಿಗಳಾದ ಡಾ.ಜ್ಞಾನದೇವ ಬುಳ್ಳಾ, ಡಾ.ಚಂದ್ರಕಾಂತ ಮತ್ತು ಡಾ.ಮಲ್ಲಪರವರು ಕ್ಷೇತ್ರ ಭೇಟಿಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News