ಕಲಬುರಗಿ | ಅಮೀನ್ ಮುಕ್ತಾರ್ ವಿರುದ್ಧದ ಆರೋಪಕ್ಕೆ ಅಖಿಲ ಕರ್ನಾಟಕ ದಲಿತ ಸೇನೆ ಖಂಡನೆ
ಕಲಬುರಗಿ : ಲೋಕೋಪಯೋಗಿ ಇಲಾಖೆಯ ಸುಪರಿಂಟೆಂಡೆಂಟ್ ಇಂಜಿನಿಯರ್ ಅಮೀನ್ ಮುಕ್ತಾರ್ ಅಹ್ಮದ್ ಅವರ ವಿರುದ್ಧ ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಮಾಡುತ್ತಿರುವ ಆರೋಪಗಳನ್ನು ಅಖಿಲ ಕರ್ನಾಟಕ ದಲಿತ ಸೇನೆಯ ರಾಜ್ಯಾಧ್ಯಕ್ಷ ದತ್ತಾತ್ರೇಯ ಕುಡಕಿ ಖಂಡಿಸಿದ್ದಾರೆ.
ಅಮೀನ್ ಮುಕ್ತಾರ್ ಅವರ ಮೇಲೆ ಲೋಕಾಯುಕ್ತ ತನಿಖೆ ನಡೆದಿರುವುದು ಜಿಲ್ಲೆಗೆ ತಿಳಿದ ವಿಷಯ. ಆದರೆ, ಲೋಕಾಯುಕ್ತ ಹೆಸರನ್ನು ಬಳಸಿಕೊಂಡು ಹಾಗೂ ಅಕ್ರಮ ಆಸ್ತಿ ಮಾಡಿದ್ದಾರೆಂದು ಸುಳ್ಳು ಆರೋಪ ಮಾಡಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡುವುದು ಸರಿಯಲ್ಲ. ಕೃಷ್ಣಾರೆಡ್ಡಿ ಅವರು ಲಿಂಗಾಯತ, ಬ್ರಾಹ್ಮಣ ಹಾಗೂ ಇತರ ಮೇಲ್ವರ್ಗದ ಅಧಿಕಾರಿಗಳ ಭ್ರಷ್ಟಾಚಾರವನ್ನು ಪ್ರಶ್ನಿಸದೆ, ಕೆಳವರ್ಗದ ಅಧಿಕಾರಿಗಳ ವಿರುದ್ಧ ಮಾತ್ರ ಆರೋಪ ಮಾಡುವುದು ಮಾನಸಿಕ ಕಿರುಕುಳ ನೀಡುವಂತಾಗಿದೆ. ಇದನ್ನು ದಲಿತ ಸೇನೆ ಸಹಿಸದು ಎಂದು ಕಿಡಿಕಾರಿದರು.
ಅಮೀನ್ ಮುಕ್ತಾರ್ ಅವರು 2018–2020ರಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿ ಕಲಬುರಗಿಯಲ್ಲಿ, 2021ರಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಹಾಗೂ ಪ್ರಸ್ತುತ ಕಲಬುರಗಿಯ ಲೋಕೋಪಯೋಗಿ ಇಲಾಖೆಯಲ್ಲಿ ಎಸ್.ಇ. ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಹಿಂದುಳಿದ ವರ್ಗದವರು, ದಲಿತರು, ಉನ್ನತ ವರ್ಗದ ಗುತ್ತಿಗೆದಾರರು ಹಾಗೂ ರಾಜಕೀಯ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಸಮಾನವಾಗಿ ಕೆಲಸದ ಅವಕಾಶ ನೀಡುವ ಮೂಲಕ ಆರ್ಥಿಕ ಸಬಲೀಕರಣಕ್ಕೆ ಸಹಕರಿಸಿದ್ದಾರೆ ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಮನುವಾದಿ ಚಟುವಟಿಕೆಗಳಿಂದ ಕಲಬುರಗಿಯಲ್ಲಿ ದಲಿತರು, ಮುಸ್ಲಿಮರು, ಕೆಳವರ್ಗದ ಸರ್ಕಾರಿ ನೌಕರರು ಉನ್ನತ ಹುದ್ದೆಗಳಲ್ಲಿ ಮುಂದುವರಿಯದಂತೆ ಸುಳ್ಳು ಆರೋಪಗಳ ಮೂಲಕ ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸಲಾಗುತ್ತಿದೆ. ಇದು ವಿಷಾದನೀಯ ಸಂಗತಿ ಎಂದು ಅವರು ಆರೋಪಿಸಿದರು.
ಈ ವೇಳೆ ಸಂಜೀವಕುಮಾರ ಕಾಂಬಳೆ ಹಾಗೂ ನಾಗರಾಜ ಭಾವಿಮನಿ ಉಪಸ್ಥಿತರಿದ್ದರು.