ಕಲಬುರಗಿ | ಪತ್ನಿ ಕಿರುಕುಳ ಆರೋಪ : ಪತಿ ಆತ್ಮಹತ್ಯೆ
ಕಲಬುರಗಿ : ಪತ್ನಿ ಹಾಗೂ ಆಕೆಯ ಪೋಷಕರ ಕಿರುಕುಳಕ್ಕೆ ಮನನೊಂದು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಮಹಾದೇವ ನಗರದಲ್ಲಿ ಸೋಮವಾರ ನಡೆದಿದೆ.
ಮಹಾದೇವ ನಗರದ ನಿವಾಸಿ ರಾಕೇಶ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದುಬಂದಿದೆ.
ಮೃತ ರಾಕೇಶ್ ಅವರ ವಿವಾಹವು ಕಳೆದ ಕೆಲವು ತಿಂಗಳ ಹಿಂದೆ ಯಡ್ರಾಮಿ ತಾಲೂಕಿನ ಕುಳಗೇರಿ ಗ್ರಾಮದ ಮೇಘಾ ಎಂಬುವವರ ಜೊತೆ ನಡೆದಿತ್ತು. ಮದುವೆ ಆದಾಗಿನಿಂದ ಪತ್ನಿ ರಾಕೇಶ್ ನೊಂದಿಗೆ ಜಗಳವಾಡುತ್ತಿದ್ದಳು ಎಂದು ಮೃತರ ತಾಯಿ ಆರೋಪ ಮಾಡಿದ್ದಾರೆಂದು ತಿಳಿದುಬಂದಿದೆ.
ಪತ್ನಿ ಹಾಗೂ ಪತ್ನಿಯ ತಾಯಿ ಮತ್ತು ಸಹೋದರಿ ನೀಡುತ್ತಿದ್ದ ಕಿರುಕುಳದಿಂದಾಗಿ ಬೇಸತ್ತಿದ್ದ ರಾಕೇಶ್, ಮನನೊಂದು ಸೋಮವಾರ ಬೆಳಗ್ಗೆ ಮಹಾದೇವ ಬಡಾವಣೆಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಪಿಐ ರಾಘವೇಂದ್ರ ಭಜಂತ್ರಿ ಅವರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಚೌಕ್ ಪೊಲೀಸ್ ಠಾಣೆಯಲ್ಲಿ ಮೃತ ರಾಕೇಶನ ತಾಯಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.