ಕಲಬುರಗಿ | ಮಳೆಯಿಂದ ಹಾನಿಗೊಳಗಾದ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಅಂಬಾರಾಯ ಅಷ್ಠಗಿ ಆಗ್ರಹ
ಕಲಬುರಗಿ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮುಂಗಾರು ಬೆಳೆಗಳಾದ ತೋಗರಿ, ಹೆಸರು, ಉದ್ದು , ಸೋಯಾಬೀನ್, ಎಳ್ಳು , ಹತ್ತಿ ಸೇರಿದಂತೆ ಇನ್ನೂ ಅನೇಕ ಬೆಳೆಗಳು ಮಳೆಗೆ ಸಂಪೂರ್ಣ ನಾಶವಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಹಾನಿಯಾಗಿರುವ ಬೆಳೆಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಸೇರಿದಂತೆ ಇತರೆ ಬೆಳೆಗಳನ್ನು ಬಿತ್ತಲಾಗಿತ್ತು. ಇವುಗಳು ಸಂಪೂರ್ಣ ಮಳೆಗೆ ನಾಶವಾಗಿವೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಸೂಕ್ತ ಪರಿಹಾರವನ್ನು ಸಮರೋಪಾದಿಯಲ್ಲಿ ವಿತರಿಸಬೇಕು ಎಂದರು.
ಈ ಭಾರಿ ಮಳೆಗೆ ಅನ್ನದಾತನ ಬದುಕು ಬತ್ತಿ ಹೋಗಿದೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಬೆಳೆಗಳ ಹಾನಿಯ ಬಗ್ಗೆ ನಿಖರವಾದ ಮಾಹಿತಿಯನ್ನು ಇಲ್ಲಿಯವರೆಗೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳೆ ವಿಮಾ ಮಾಡಿಸಿದವರಿಗೆ ದೂರು ನೀಡಲು ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿದರೆ ಅದು ಕರೆ ಸ್ವೀಕರಿಸುತ್ತಿಲ್ಲ. ರೈತರು ಖುದ್ದಾಗಿ ಕೃಷಿಯ ಇಲಾಖೆಯ ಕಚೇರಿಗೆ ಹೋಗಿ ದೂರು ಸಲ್ಲಿಸಲು ಹೇಳುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಟೋಲ್ ಫ್ರೀ ನಂಬರ್ ಎಲ್ಲಾ ರೈತರಿಗೆ ದೂರು ಸ್ವೀಕರಿಸಲು ಮುಕ್ತವಾಗಿಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಗಣೇಶ್ ವಳಕೇರಿ, ರವಿ ಮದನಕರ್, ಜೈ ಭೀಮ್ ಕಟ್ಟಿ, ಶಿವು ಅಷ್ಠಗಿ ಇತರರಿದ್ದರು.
ಸರಕಾರ ಶಾಶ್ವತ ಪರಿಹಾರ ಕೈಗೊಳ್ಳಲಿ :
ಸೇಡಂ ತಾಲೂಕಿನ ಮಳಖೇಡನಲ್ಲಿ ಉತ್ತರಾದಿ ಮಠದ ಶ್ರೀ ಜಯತೀರ್ಥರ ಮೂಲ ಬೃಂದಾವನದ ಗರ್ಭಗುಡಿಗೆ ಪ್ರವೇಶಿಸಿದೆ. ಇದರಿಂದ ಭಕ್ತರಿಗೆ ತೊಂದರೆಯಾಗುತ್ತಿದ್ದು, ಇದರ ಬಗ್ಗೆ ಸರ್ಕಾರ ಶಾಶ್ವತ ಪರಿಹಾರ ಕೈಗೊಳ್ಳಬೇಕು. ಅಫಜಲಪುರ ತಾಲ್ಲೂಕಿನಲ್ಲಿ ಸುಮಾರು 69 ಮನೆಗಳು ಹಾಳಾಗಿದ್ದು, ಮಣ್ಣೂರ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಪ್ರತಿವರ್ಷ ಹೀಗಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಆಗ್ರಹಿಸುತ್ತೇವೆ. ಆಳಂದ ತಾಲೂಕಿನ ಜಿಡಗಾ ಗ್ರಾಮ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸುಮಾರು 29 ಮನೆಗಳು ಹಾಳಾಗಿದ್ದು ಪರಿಹಾರ ಮಾತ್ರ ಇನ್ನು ಮರೀಚಿಕೆಯಾಗಿದೆ. ಈ ಕೂಡಲೇ ಪರಿಹಾರ ನೀಡಬೇಕು ಎಂದು ಡಾ.ಅಂಬಾರಾಯ ಅಷ್ಠಗಿ ಒತ್ತಾಯಿಸಿದರು.