×
Ad

ಕಲಬುರಗಿ | ಅಂಬಿಗರ ಚೌಡಯ್ಯನವರ ಮೂರ್ತಿ ವಿರೂಪ ಪ್ರಕರಣ; ಪೊಲೀಸರಿಂದ ಸುಳ್ಳು ಕೇಸ್ ದಾಖಲು : ಆರೋಪಿ ಶಿವರಾಜ್ ನಾಟೀಕಾರ್ ಆರೋಪ

Update: 2025-10-20 17:56 IST

ಕಲಬುರಗಿ: ಚಿತ್ತಾಪುರ ಮತಕ್ಷೇತ್ರದ ಶಹಾಬಾದ್ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ವಿರೂಪ ಪ್ರಕರಣದಲ್ಲಿ ಪೋಲಿಸರು ನನ್ನನ್ನೂ ಸೇರಿದಂತೆ ಮೂವರ ಹೆಸರು ವಿನಾಕಾರಣ ಹಾಕಿದ್ದಾರೆ. ಹಾಗಾಗಿ ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಬಂಧಿಸಿ, ತನಿಖೆಗೆ ಒಳಪಡಿಸಬೇಕು ಎಂದು ಮೂರ್ತಿ ವಿರೂಪಗೊಳಿಸಿದ ಆರೋಪಿ ಹಾಗೂ ಮುತ್ತಗಾ ಗ್ರಾಮದ ಕೋಲಿ ಸಮಾಜದ ಅಧ್ಯಕ್ಷ ಶಿವರಾಜ್ ನಾಟೀಕಾರ್ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಆರಾಧ್ಯ ದೈವವಾಗಿರುವ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿಲ್ಲ. ನಿಜವಾದ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಉದ್ದೇಶಪೂರ್ವಕವಾಗಿ ನಮ್ಮ ಹೆಸರನ್ನು ಉಲ್ಲೇಖಿಸಿ, ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾರೆ ಆರೋಪಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಹ ಜಾಮೀನು ಪಡೆದಿದ್ದೇವೆ. ಕಾನೂನು ಹೋರಾಟವನ್ನು ಎದುರಿಸುತ್ತೇವೆ. ಮುತ್ತಗಾ ಗ್ರಾಮದಲ್ಲಿನ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನಿಜವಾದ ಆರೋಪಿಗಳು ಸಿಗುವವರೆಗೂ ಕಾಲಿನಲ್ಲಿ ಚಪ್ಪಲಿ ಹಾಕದಿರಲು ತೀರ್ಮಾನಿಸಿದ್ದಾಗಿ ಶಿವರಾಜ್ ಹೇಳಿದರು.

ಮೂರ್ತಿ ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಮೊದಲು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರಿಗೆ ದೂರವಾಣಿ ಕರೆ ಮಾಡಿರುವೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಮೂರ್ತಿ ವಿರೂಪಗೊಳಿಸಿದ ಕುರಿತು ನಾನು ಮೊದಲಿಗೆ ಶಹಾಬಾದ್ ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಅವರಿಗೆ ಮಾಹಿತಿ ನೀಡಿದ್ದೇನೆ. ನಂತರ ಎಲ್ಲರಿಗೂ ವಿಷಯ ತಿಳಿಸಿರುವೆ ಎಂದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ವೀರೇಂದ್ರ ಪಂಚಾಳ್ ಅವರ ವಿರುದ್ಧ ಸುಳ್ಳು ದೂರು ಸಲ್ಲಿಸಿದ್ದರು. ಮೂರ್ತಿ ವಿರೂಪಗೊಳಿಸಿದಾಗ ವೀರೇಂದ್ರ ಪಂಚಾಳ್ ಬೆಂಗಳೂರಿನಲ್ಲಿ ಇದ್ದರು. ಹಾಗಾಗಿ ಆ ಕುರಿತು ನಾನು ಆಕ್ಷೇಪ ವ್ಯಕ್ತಪಡಿಸಿದಾಗ ನನ್ನ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವಿವರಿಸಿದರು.

ಇನ್ನೊಬ್ಬ ಆರೋಪಿ ಸಾಯಬಣ್ಣ ತಳವಾರ್ ಮಾತನಾಡಿ, ಪೊಲೀಸರು ನನಗೆ ಮಾಡಬೂಳ್ ಠಾಣೆಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಹಲ್ಲೆ ಮಾಡಿ ಶಿವರಾಜ್ ನಾಟೀಕಾರ್ ಅವರ ಹೆಸರು ಹೇಳಲು ಹೆದರಿಸಿದರು. ಭಯಪಟ್ಟು ನಾನು ಅವರ ಹೆಸರುಗಳನ್ನು ಹೇಳಿದೆ. ಆ ಪ್ರಕರಣದಲ್ಲಿ ಶಿವರಾಜ್ ನಾಟೀಕಾರ್ ಅವರ ಪಾತ್ರ ಇಲ್ಲ. ನಾನು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿ ಗುಣಮುಖವಾಗಿ ಮರಳಿ ಬಂದಿರುವೆ. ನಾನು ಈ ಕುರಿತು ನನ್ನ ಹೇಳಿಕೆಗೆ ಬದ್ಧವಾಗಿರುವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮತ್ತೊಬ್ಬ ಆರೋಪಿ ಮಲ್ಲು ಪಾಟೀಲ್, ಗ್ರಾಮದ ಮುಖಂಡರಾದ ಶ್ರೀಕಾಂತ ಪಟ್ಟೇದಾರ್, ಬೆಳ್ಳೂರಾಯ್ ಹಳ್ಳಿ, ಸಾಯಬಣ್ಣ ವಾಲಿಕಾರ್, ಮಲ್ಲಮ್ಮ ಪಟ್ಟೇದಾರ್, ಚಂದ್ರಕಲಾ ನಾಟೀಕಾರ್, ಲಕ್ಷ್ಮೀ ನಾಟೀಕಾರ್, ಶಂಕರ್ ನಾಟೀಕಾರ್ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News