×
Ad

ಕಲಬುರಗಿ | ಮಾಣಿಕೇಶ್ವರಿ ಆಶ್ರಮವನ್ನು ಪ್ರವಾಸಿ ತಾಣವನ್ನಾಗಿಸುವ ನಿರ್ಧಾರ ಕಾರ್ಯರೂಪಕ್ಕೆ ತರಲು ಮನವಿ

Update: 2025-07-02 22:44 IST

ಕಲಬುರಗಿ: ಸೇಡಂ ತಾಲ್ಲೂಕಿನ ಯಾನಾಗುಂದಿ ಗ್ರಾಮದ ಸೂರ್ಯನಂದಿ ಬೆಟ್ಟದಲ್ಲಿರುವ ಸದ್ಗುರು ರೂಪರಹಿತ ಮಾತಾ ಮಾಣಿಕೇಶ್ವರಿ ಆಶ್ರಮವನ್ನು ಪ್ರವಾಸಿ ತಾಣವನ್ನಾಗಿ ಘೋಷಣೆ ಮಾಡಿದ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ನಿರ್ಧಾರ ಸ್ವಾಗತಾರ್ಹ, ಈ ಬಗ್ಗೆ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಗಮನ ಸೆಳೆಯುವಂತೆ ಆಗ್ರಹಿಸಿ ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜ ಮಾತಾ ಟ್ರಸ್ಟ್ ನ ಟ್ರಸ್ಟಿಗಳ ನಿಯೋಗವು ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.

ಕಳೆದ ಮಾರ್ಚ್ ತಿಂಗಳಲ್ಲಿ ಬಜೆಟ್ ಅಧಿವೇಶನದಲ್ಲಿ ಮೇಲ್ಮನೆ ಕಲಾಪದಲ್ಲಿ ಎಂಎಲ್ಸಿಗಳಾದ ತಿಪ್ಪಣ್ಣಪ್ಪ ಕಮಕನೂರ, ಡಾ.ಸೈಬಣ್ಣ ತಳವಾರ ಮತ್ತಿತರರು ಸೇರಿ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮವನ್ನು ಪ್ರವಾಸಿ ತಾಣವನ್ನಾಗಿ, ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಬಗ್ಗೆ ಧ್ವನಿ ಎತ್ತಿರುವುದು ಅಭಿನಂದನಾರ್ಹ. ಕಳೆದ ಎರಡ್ಮೂರು ದಶಕಗಳಿಂದಲ್ಲೂ ಭಕ್ತರು ಆಳುವ ಸರ್ಕಾರಗಳ ಮೇಲೆ ಒತ್ತಡ ಹಾಕುತ್ತಾ ಬಂದಿದ್ದರೂ ಫಲಪ್ರದವಾಗಲಿಲ್ಲ. ಸಚಿವ ಹೆಚ್.ಕೆ. ಪಾಟೀಲ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಮಾಣಿಕೇಶ್ವರಿಯವರ ಪರಮ ಭಕ್ತರಾಗಿರುವ ಹಿನ್ನೆಲೆಯಲ್ಲಿ ಅತೀವ ಆಸಕ್ತಿವಹಿಸಿ ದಿಟ್ಟ ಕ್ರಮ ಕೈಗೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ ಎಂದು ನಿಯೋಗ ತಿಳಿಸಿದೆ.

ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರಿಸಿ, ತುಳಿತಕ್ಕೊಳಗಾದ ಸಮಾಜಕ್ಕೆ ನ್ಯಾಯ ಒದಗಿಸಿಕೊಡುತ್ತೇನೆ. ಮಾತಾ ಮಾಣಿಕೇಶ್ವರಿ ಆಶ್ರಮ ಸಮಗ್ರ ಅಭಿವೃದ್ಧಿಗೆ ಶೀಘ್ರ ಅನುದಾನ ಬಿಡುಗಡೆಗೊಳಿಸುವಂತೆ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಒತ್ತಾಯಿಸಿದಲ್ಲದೆ, ಅಭಿವೃದ್ಧಿ ಕಾಮಗಾರಿಗಳಿಗಾಗಿ ಶೀಘ್ರ ಮುಹೂರ್ತ ನಿಗದಿಪಡಿಸಿ ಆಮಂತ್ರಿಸುವುದಾಗಿ ಕಮಕನೂರ ಭರವಸೆ ನೀಡಿದರು.

ಕಾರ್ಯದರ್ಶಿ ಶಿವಯ್ಯ ಸ್ವಾಮಿ, ಟ್ರಸ್ಟಿಗಳಾದ ಸಿದ್ರಾವಪ್ಪ ಸಣ್ಣೂರಕರ್, ಹಣಮಂತ ಮಡ್ಡಿ, ಕೃಷ್ಣಪ್ಪ ಮಾಸ್ಟರ್, ತುಳಜಪ್ಪ ಡೊಣ್ಣೂರ್, ಸೂರ್ಯಕಾಂತ ಅವರಾದಿ, ಬಾಬುರಾವ ಕೋಬಾಳ, ವಿಜಯಕುಮಾರ ಹದಗಲ್, ರಾಯಪ್ಪ ಹೊನಗುಂಟಿ, ಅರ್ಜುನ ಜಮಾದಾರ್, ಶಿವಾನಂದ ಹೊನಗುಂಟಿ, ಶಿವಕುಮಾರ ತಾವರಗೇರಾ, ಮಾಣಿಕರಾಜ, ರಾಜು ಸೊನ್ನ ಸೇರಿ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News