ಕಲಬುರಗಿ | ರಂಗಾಯಣಕ್ಕೆ ತಂತ್ರಜ್ಞರ, ಕಲಾವಿದರ ನೇಮಕಾತಿಗೆ ಅರ್ಜಿ ಆಹ್ವಾನ
ಕಲಬುರಗಿ: ಕಲಬುರಗಿ ರಂಗಾಯಣವು ಸಿದ್ಧಪಡಿಸುವ ನಾಟಕಗಳಿಗೆ ಹಾಗೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಂದು ವರ್ಷದ ಅವಧಿಗೆ 3 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರುಗಳನ್ನು ನೇಮಕ ಮಾಡಿಕೊಂಡು ರೆಪರ್ಟರಿ ಪ್ರಾರಂಭಿಸಲಾಗುತ್ತಿದ್ದು, ಇದಕ್ಕಾಗಿ ಆಸಕ್ತಿಯುಳ್ಳ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ರಂಗಾಯಣ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ರಂಗಾಯಣಕ್ಕೆ ಮೂರು ಜನ ತಂತ್ರಜ್ಞರನ್ನು ಗೌರವ ಸಂಭಾವನೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ. ಸಂಗೀತ/ ಧ್ವನಿ-ಬೆಳಕು/ ರಂಗಸಜ್ಜಿಕೆ/ ಪರಿಕರ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ರಂಗಾನುಭವ ಹೊಂದಿರಬೇಕು. ಕನ್ನಡ ಭಾಷೆ ಓದುವ, ಬರೆಯುವ ಮತ್ತು ಮಾತನಾಡುವ ಸಾಮಾಥ್ರ್ಯ ಹೊಂದಿರಬೇಕು. ರಂಗಾನುಭವ ಮತ್ತು ಶೈಕ್ಷಣಿಕ ಅರ್ಹತೆಗಳು ಇದ್ದಲ್ಲಿ ಅಂತಹ ತಂತ್ರಜ್ಞರಿಗೆ ಆದ್ಯತೆ ನೀಡಲಾಗುವುದು. ಈ ನೇಮಕವು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ತಂತ್ರಜ್ಞರ ಸಂಚಿತ ಮಾಸಿಕ ಗೌರವ ಸಂಭಾವನೆ 25,000 ರೂ. ಗಳು ನೀಡಲಾಗುತ್ತದೆ. ಇತರೆ ಯಾವುದೇ ಭತ್ಯೆಗಳು ಇರುವುದಿಲ್ಲ. ಅದೇ ರೀತಿ ಕಲಬುರಗಿ ರಂಗಾಯಣವು 12 ಜನ ಕಲಾವಿದರನ್ನು ಗೌರವ ಸಂಭಾವನೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಕಲಾವಿದರ ನೇಮಕದಲ್ಲಿ 4 ಜನ ಮಹಿಳೆಯರು ಮತ್ತು 4 ಜನ ಪರಿಶಿಷ್ಟ ಜಾತಿ/ ವರ್ಗದ ಕಲಾವಿದರಿಗೆ ಮೀಸಲಿಡಲಾಗಿದೆ. ವಯೋಮಿತಿ 20 ರಿಂದ 32 ವರ್ಷದೊಳಗಿರಬೇಕು.
ನಿಗದಿತ ಅರ್ಜಿ ನಮೂನೆಯನ್ನು ರಂಗಾಯಣದ www.rangayanakalaburagi.karnataka.gov.in ವೆಬ್‍ಸೈಟ್ ನಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು. ನಂತರ ಭರ್ತಿ ಮಾಡಿದ ಅರ್ಜಿಯನ್ನು 2025ರ ಜುಲೈ 28ರ ಸಂಜೆ 5.30 ಗಂಟೆಯೊಳಗಾಗಿ ತಲುಪುವಂತೆ ಆಡಳಿತಾಧಿಕಾರಿಗಳು, ರಂಗಾಯಣ, ಡಾ.ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸೇಡಂ-ಶಹಾಬಾದ ವರ್ತುಲ ರಸ್ತೆ, ಕಲಬುರಗಿ-585105 ಈ ವಿಳಾಸಕ್ಕೆ ಅಥವಾ ಇ-ಮೇಲ್ ವಿಳಾಸ rangayanakalaburgi@gmail.com ಗೆ ಅರ್ಜಿ ಸಲ್ಲಿಸಬೇಕು.
ಸಂದರ್ಶನದ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ರಂಗಾಯಣದ ನಿಯಮ ಹಾಗೂ ಷರತ್ತುಗಳಿಗೆ ಬದ್ಧರಾಗಿರಬೇಕು. ಸಂದರ್ಶನದ ಸಂದರ್ಭದಲ್ಲಿ ತರಬೇಕಾದ ಮೂಲ ದಾಖಲೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ರಂಗಾಯಣ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಕಲಬುರಗಿ ರಂಗಾಯಣವು ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ಅಧಿಕೃತ ರೆಪರ್ಟರಿಯಾಗಿದ್ದು, ಡಾ.ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿ ಕಚೇರಿ ಹೊಂದಿದ್ದು, ರಂಗ ತರಬೇತಿ, ನಾಟಕಗಳ ಸಿದ್ಧತೆ, ಪ್ರದರ್ಶನ, ರಂಗ ಶಿಬಿರಗಳು ಹೀಗೆ ಸಂಪೂರ್ಣ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. 10 ವರ್ಷಗಳಿಂದ ನಿರಂತರವಾಗಿ ರಂಗಚಟುವಟಿಕೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.