×
Ad

ಕಲಬುರಗಿ | ಕಲೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ: ಲಕ್ಷ್ಮಣ ದಸ್ತಿ

ನಗರದಲ್ಲಿ ಇಸ್ಲಾಮಿಕ್ ಕಲಾ ಪ್ರದರ್ಶನ ಉದ್ಘಾಟನೆ

Update: 2025-09-06 12:33 IST

ಕಲಬುರಗಿ: ಕಲೆ ಒಂದು ವಿಶ್ವವ್ಯಾಪಿಯಾಗಿದ್ದು, ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರುವುದಿಲ್ಲ. ಇಸ್ಲಾಮಿಕ್ ಕಲಾ ಪ್ರದರ್ಶನವು ವಿವಿಧ ಧರ್ಮಗಳ ಕಲಾತ್ಮಕ ಪರಂಪರೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದೆ ಎಂದು ಸಾಮಾಜಿಕ ಹೋರಾಟಗಾರ ಲಕ್ಷ್ಮಣ ದಸ್ತಿ ತಿಳಿಸಿದರು.

ಶುಕ್ರವಾರ ನಗರದ ಹಿದಾಯತ್ ಕೇಂದ್ರದಲ್ಲಿ ನಡೆದ ಮಿಲಾದುನ್ನಭಿ ಅಂಗವಾಗಿ ಆಯೋಜಿಸಲಾದ ಎರಡು ದಿನಗಳ ಇಸ್ಲಾಮಿಕ್ ಕಲಾ ಪ್ರದರ್ಶನವನ್ನು ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನಮ್ಮ ಐತಿಹಾಸಿಕ ಬಹ್ಮನಿ ಕೋಟೆ ಕುರಿತು ಉಲ್ಲೇಖಿಸಿದ್ದು, ಅದು ಅದ್ಭುತ ಇಸ್ಲಾಮಿಕ್-ಇಂಡೋ ಶೈಲಿಯ ವಾಸ್ತುಶಿಲ್ಪ ಕೃತಿಗಳಿಂದ ಕೂಡಿದೆ ಎಂದು ಸ್ಮರಿಸಿದರು.

ಪತ್ರಕರ್ತ ಪ್ರಭಾಕರ್ ಜೋಶಿ ಮಾತನಾಡಿ, ಈ ಪ್ರದರ್ಶನವು ಸೃಜನಶೀಲತೆ ಮತ್ತು ಸಮಾಜವನ್ನು ಸೇರುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಚಿಂತನೆ, ಸಂವಾದ ಮತ್ತು ಕಲೆಯ ಶಕ್ತಿಯನ್ನು ಮೆಚ್ಚುವ ಸಂದರ್ಭಗಳನ್ನು ಒದಗಿಸಿದೆ ಎಂದು ಹೇಳಿದರು

ಕೆಬಿಎನ್ ವಿಶ್ವವಿದ್ಯಾಲಯದ ಉರ್ದು ಪ್ರಾಧ್ಯಾಪಕ ಅಥರ್ ಮೊಯಿಜುದ್ದೀನ್, ನಗರದ ಕಲಾವಿದರು ತಮ್ಮ ಕಲಾಕೃತಿಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಹರಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಇನ್ನೋವೇಟಿವ್ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಷನ್ಸ್ ಸಂಸ್ಥಾಪಕ ಅಧ್ಯಕ್ಷ ಝಮೀರ್ ಅಹ್ಮದ್, ಪ್ರವಾದಿ ಮುಹಮ್ಮದ್ ಅವರ ಜೀವನ ಮತ್ತು ಉಪದೇಶಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾವಿದ ಹಾಗೂ ಪ್ರದರ್ಶನ ಸಂಚಾಲಕ ಮುಹಮ್ಮದ್ ಆಯಾಜುದ್ದೀನ್ ಪಟೇಲ್ ಅವರು, “ಕಳೆದ ಐದು ವರ್ಷಗಳಿಂದ ನಾವು ಈ ಪ್ರದರ್ಶನವನ್ನು ಆಯೋಜಿಸುತ್ತಿದ್ದೇವೆ. ನಮ್ಮ ಉದ್ದೇಶ ಕಲಾವಿದರನ್ನು ಒಂದೇ ಗೂಡಿನಲ್ಲಿ ಸೇರಿಸಿ ಏಕತೆ ಮತ್ತು ಮಾನವೀಯತೆಯ ಸಂಸ್ಕೃತಿಯನ್ನು ಹಂಚಿಕೊಳ್ಳುವುದು” ಎಂದು ಹೇಳಿದರು.

ಹಿರಿಯ ಕಲಾವಿದರಾದ ಬಸವರಾಜ್ ಉಪ್ಪಿನ್, ರಾಜಶೇಖರ್ ಎಸ್, ಸುಬ್ಬಯ್ಯ ನೀಲ, ರೆಹಮಾನ್ ಪಟೇಲ್, ಮುಹಮ್ಮದ್ ಸೈಯದ್, ವಿ.ಬಿ. ಬಿರಾದರ್, ಸಯ್ಯದ್ ಮುಸ್ತಫಾ, ಶೈಖ್ ಅಹ್ಸನ್ ಹಾಗೂ ಹಲವಾರು ಕಲಾವಿದರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರದರ್ಶನವು ಸೆ. 6ರಂದು ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News