×
Ad

ಕಲಬುರಗಿ| ಪ್ರತಿಷ್ಠಿತ ʼಬಸವ ಪುರಸ್ಕಾರʼ ಪ್ರಶಸ್ತಿಗೆ ಬಸವರಾಜ ದೇಶಮುಖ ಆಯ್ಕೆ

Update: 2025-08-07 16:56 IST

ಕಲಬುರಗಿ: ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರನ್ನು ಬೆಂಗಳೂರು ಮೂಲದ ಬಸವ ಪರಿಷತ್ತು ಸ್ಥಾಪಿಸಿದ ಪ್ರತಿಷ್ಠಿತ ʼಬಸವ ಪುರಸ್ಕಾರʼ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬಸವ ಪರಿಷತ್ತಿನಿಂದ ಬಂದ ಪತ್ರದ ಪ್ರಕಾರ, ಶಿಕ್ಷಣ ಮತ್ತು ಸಾಮಾಜಿಕ ಸೇವೆ ಕ್ಷೇತ್ರದಲ್ಲಿ ಅಪಾರ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿಯನ್ನು ಕೊಡಮಾಡಲು ಆಯ್ಕೆ ಮಾಡಲಾಗಿದೆ. ಆ.9 ರಂದು ಬೆಂಗಳೂರಿನ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಪತ್ರದಲ್ಲಿ ತಿಳಿಸಲಾಗಿದೆ.

ಮೈಸೂರು ಜಿಲ್ಲೆಯ ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎನ್ ಸಂತೋಷ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಮಿಕ ಸಚಿವ ಸಂತೋಷ ಲಾಡ್, ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ, ಹರಪನಹಳ್ಳಿ, ಶಾಸಕಿ ಎಂ. ಪಿ ಲತಾ ಮಲ್ಲಿಕಾರ್ಜುನ ಮತ್ತು ಇತರರು ಸಮಾರಂಭದಲ್ಲಿ ಉಪಸ್ಥಿತರಿರುವರು.

ಬಸವ ಪುರಸ್ಕಾರ ಪ್ರಶಸ್ತಿಯನ್ನು ಸ್ವೀಕರಿಸಲಿರುವ ಪ್ರಮುಖರಲ್ಲಿ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್ ಕಿರಣ್‍ಕುಮಾರ್, ಪರಿಸರ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಅಲ್ಮಿತ್ರಾ ಪಟೇಲ್, ಕಾನೂನು ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಕಾನೂನು ತಜ್ಞ ಪ್ರೊ. ರವಿವರ್ಮ ಕುಮಾರ್, ಮಾಜಿ ಸಚಿವ ಎಸ್.ಆರ್ ಪಾಟೀಲ್ (ಶಿಕ್ಷಣ ಮತ್ತು ಸಹಕಾರ), ಶ್ರೀಮತಿ ಉಮಾಶ್ರೀ (ರಂಗಭೂಮಿ ಮತ್ತು ಸಿನಿಮಾ) ಹಾಗೂ ಇನ್ನಿತರರು ಸೇರಿದ್ದಾರೆ. ಬಸವ ಪುರಸ್ಕಾರ ಪ್ರಶಸ್ತಿಯನ್ನು ಸ್ವೀಕರಿಸಲು ವಿವಿಧ ಕ್ಷೇತ್ರಗಳ ಒಟ್ಟು 15 ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ.

ಕಲಬುರಗಿ ಸಮಾಜದಲ್ಲಿ ಅಣ್ಣಾ ಅವರು ಎಂದೇ ಚಿರಪರಿಚಿತರಾದ ಬಸವರಾಜ ದೇಶಮುಖ ಅವರಿಗೆ 2025ರ ಈ ಪ್ರತಿಷ್ಠಿತ “ಬಸವ ಪುರಸ್ಕಾರ“ ಲಭಿಸಿದ್ದಕ್ಕಾಗಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವ ಡಾ.ಎಸ್ ಜಿ ಡೊಳ್ಳೆಗೌಡರ್ ಹಾಗೂ ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ ಹರ್ಷ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News