×
Ad

ಕಲಬುರಗಿ | ಬಸವೇಶ್ವರ ಪ್ರತಿಮೆ ತೆರವು ಖಂಡಿಸಿ ಬೃಹತ್ ಪ್ರತಿಭಟನೆ

Update: 2025-08-18 22:04 IST

ಕಲಬುರಗಿ : ಆಳಂದ ತಾಲೂಕಿನ ಖಜೂರಿ ವಲಯದ ರುದ್ರವಾಡಿ ಗ್ರಾಮದಲ್ಲಿ ಬಸವೇಶ್ವರ ಪ್ರತಿಮೆ ತೆರವುಗೊಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಗ್ರಾಮಸ್ಥರ ನೇತೃತ್ವದಲ್ಲಿ ಆಳಂದ ತಾಲೂಕು ಆಡಳಿತ ಸೌಧದ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಬಸವೇಶ್ವರ ಪ್ರತಿಮೆಯನ್ನು ತಹಶೀಲ್ದಾರರು ಹಾಗೂ ಪೊಲೀಸ್ ಅಧಿಕಾರಿಗಳು ಸೇರಿ ತೆರವುಗೊಳಿಸಿ ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ಇರಿಸಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದ ಕುರಿತು ಸರ್ವೇ ನಡೆಸಲು ಅರ್ಜಿ ಸಲ್ಲಿಸಿದ್ದರೂ, ಸರ್ವೇ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲು ತಹಶೀಲ್ದಾರರು ಮತ್ತು ಪೊಲೀಸ್ ಅಧಿಕಾರಿಗಳು ಏಕಾಏಕಿ ಪ್ರತಿಮೆ ತೆರವುಗೊಳಿಸಿದ್ದು ಏಕೆ? ಇದು ಭಾವನೆಗಳಿಗೆ ಧಕ್ಕೆಯಾಗಿದೆ. ಸ್ಥಳದ ಸರ್ವೆ ಕೈಗೊಳ್ಳುವಂತೆ ಅರ್ಜಿ ಕೊಟ್ಟರೆ ಪ್ರತಿಮೆ ಏಕೆ ತೆರವುಗೊಳಿಸಲಾಗಿದೆ? ಪ್ರತಿಮೆ ತೆರವುಗೊಳಿಸುವಂತೆ ಯಾರು ಅರ್ಜಿಕೊಟ್ಟಿದ್ದಾರೆ? ಅಧಿಕಾರಿಗಳಿಗೆ ಈ ಅಧಿಕಾರವನ್ನು ಕೊಟ್ಟವರ್ಯಾರು? ಎಂದು ಪ್ರಶ್ನಿಸಿದರು. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿ ಬಸವಣ್ಣನವರನ್ನು ಹಾಗೂ ಅಭಿಮಾನಿಗಳನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಹರ್ಷಾನಂದ ಎಸ್. ಗುತ್ತೇದಾರ್, ಲಿಂಗಾಯತ ಮಹಾಸಭೆಯ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಿವಪ್ರಕಾಶ್ ಹೀರಾ, ಆಳಂದ ಬಸವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ್ ಎಂ. ಪಾಟೀಲ್, ನ್ಯಾಯವಾದಿ ಬಾಬಾಸಾಹೇಬ್ ವಿ. ಪಾಟೀಲ್, ಪುರಸಭೆ ಸದಸ್ಯ ಶಿವಪುತ್ರ ನಡಿಗೇರಿ, ಸಿದ್ದುಗೌಡ ಹಿರೋಳಿ, ಹಿಂದೂ ಸಂಘಟನೆಯ ಕಾರ್ಯಕರ್ತ ಮಹೇಶ್ ಗೌಳಿ, ವೀರಶೈವ ಮಹಾಸಭಾ ತಾಲೂಕು ಉಪಾಧ್ಯಕ್ಷ ಶ್ರೀಶೈಲ್ ಖಜೂರಿ, ಶರಣಗೌಡ ದೇವಂತಗಿ ಅವರು ಪ್ರತಿಭಟನೆಯಲ್ಲಿ ಮಾತನಾಡಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್‌ ವಶದಲ್ಲಿರುವ ಪ್ರತಿಮೆಯನ್ನು ತಕ್ಷಣ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಹರ್ಷಾನಂದ ಗುತ್ತೇದಾರ್ ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ್, “ಎರಡು ಮೂರು ದಿನಗಳಲ್ಲಿ ಸರ್ವೇ ನಡೆಸಿ, ಸ್ಥಳ ಯಾರದೆಂಬುದನ್ನು ಸ್ಪಷ್ಟಪಡಿಸಲಾಗುವುದು” ಎಂದು ಭರವಸೆ ನೀಡಿದರು. ಆದರೆ ಗ್ರಾಪಂನಲ್ಲಿರಿಸಿದ ಪ್ರತಿಮೆಯನ್ನು ತಕ್ಷಣವೇ ಹಿಂತಿರುಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಗ್ರಾ.ಪಂ.ಸದಸ್ಯ ಶ್ರೀಶೈಲ ಚಿಚಕೋಟೆ, ಶ್ರೀನಾಥ ಮೂಲಗೆ, ಸುರೇಶ ಡಿಗ್ಗಿ, ಮಾಣಿಕರಾಯ ಮೂಲಗೆ, ವೀರೆಂದ್ರ ಮಂಠಾಳೆ, ಕಾಶಿನಾಥ ಕೊಟ್ಟರಗಿ, ಧರ್ಮಣ್ಣಾ ಹಣಮಶೆಟ್ಟಿ, ವಿಜಯಾನಂದ ಘಂಟೆ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News