ಕಲಬುರಗಿ| ಕೇಂದ್ರೀಯ ವಿವಿಯಲ್ಲಿ ಅನಧಿಕೃತ ಗೋರಿ ನಿರ್ಮಾಣ ಎಂದು ಆಧಾರರಹಿತ ಹೇಳಿಕೆ: ಆಂದೋಲಾಶ್ರೀ ವಿರುದ್ಧ ಎಫ್ಐಆರ್ ದಾಖಲು
ಕಲಬುರಗಿ: ಕೇಂದ್ರೀಯ ವಿಶ್ವವಿದ್ಯಾಲಯದ ಕ್ಯಾಂಪಸ್ ಆವರಣದಲ್ಲಿ ಅನಧಿಕೃತ ಗೋರಿಗಳ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆಧಾರರಹಿತ ಹೇಳಿಕೆ ನೀಡಿದ ಆರೋಪದ ಮೇರೆಗೆ ಜೇವರ್ಗಿಯ ಅಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಹಾಗೂ ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ತಾಲ್ಲೂಕಿನ ನರೋಣಾ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ 162/2025 ಕಲಂ, 192, 196, 299, 302 ಬಿಎನ್ ಎಸ್ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.
ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಡಗಂಚಿಯ ಅವರಣದಲ್ಲಿ ಅನಧಿಕೃತವಾಗಿ ಮುಸ್ಲಿಮರು ಗೋರಿಗಳನ್ನು ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದ್ದು, ಯಾವುದೇ ಅನುಮತಿ ಇಲ್ಲದೆ ಸುಮಾರು 10 ರಿಂದ 15 ಅಡಿಯಲ್ಲಿ ಒಂದು ಮಜಾರ ನಿರ್ಮಾಣ ಮಾಡಿ ಅಲ್ಲೇ, ನಮಾಝ್ ಕೂಡ ಮಾಡುತ್ತಿದ್ದಾರೆಂದು ಮಾಹಿತಿ ಬಂದಿದೆ ಮತ್ತು ಮುಸ್ಲಿಮರು ಮುಂದಿನ ದಿನಗಳಲ್ಲಿ ಅಲ್ಲಿ ಶೆಡ್ ನಿರ್ಮಾಣ ಮಾಡಿ ನಮಾಝ್ ಮಾಡುವಂತಹ ಮಸೀದಿ ನಿರ್ಮಾಣ ಮಾಡುವಂತಹ ಒಂದು ಷಡ್ಯಂತ್ರ ನಡೆದಿದೆ. ಕೂಡಲೇ ಇಲ್ಲಿಯ ಜಿಲ್ಲಾಡಳಿತವು ಎಚ್ಚೆತ್ತುಕೊಂಡು ಆ ಮಜಾರ ನೆಲಸಮ ಮಾಡಬೇಕು. ಇಲ್ಲದೆ ಹೋದರೆ ಆ.10ರಂದು ಶ್ರೀರಾಮ ಸೇನೆ ಆ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಗೋರಿಯನ್ನು ನೆಲಸಮ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ನಾವು ಕೊಡುತ್ತಿದ್ದೇವೆ ಎಂದು ಮಾಧ್ಯಮಗಳಲ್ಲಿ ಆಂದೋಲಾಶ್ರೀ ಹೇಳಿಕೆ ನೀಡಿದ್ದರು.
ಈ ಕುರಿತಂತೆ ಸಿಬ್ಬಂದಿಯೊಬ್ಬರು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ವೇಳೆ ನೂರಾರು ವರ್ಷಗಳ ಹಿಂದಿನ ಮಜಾರ /ಗೊರಿಗಳಿದ್ದು, ಈ ಜಾಗದಲ್ಲಿ ಯಾವುದೇ ಹೊಸ ಕಟ್ಟಡ, ಮಜಾರ, ಗೋರಿ ಕಟ್ಟುತ್ತಿರುವದು ಕಂಡು ಬಂದಿಲ್ಲ. ಸಿದ್ದಲಿಂಗ ಸ್ವಾಮಿ ಯವರು ಯಾವುದೇ ಸತ್ಯ ಸತ್ಯತೆಯನ್ನು ತಿಳಿದುಕೊಳ್ಳದೆ ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಾಗೂ ಎರಡು ಧರ್ಮಗಳ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿ ಮಾಡಿ ಅವುಗಳ ಮಧ್ಯೆ ಕೊಮುಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಸಿದ್ದಲಿಂಗ ಸ್ವಾಮಿ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ ನೂರಾರು ವರ್ಷಗಳ ಹಿಂದಿನ ಮಜಾರ / ಗೋರಿಗಳನ್ನು ದ್ವಂಸಗೊಳಿಸಲಾಗುವುದು ಎಂದು ಮುಸ್ಲಿಂ ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿ, ಅವರ ಮತೀಯ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.