×
Ad

ಕಲಬುರಗಿ | ಮಳೆ, ನದಿ ಪ್ರವಾಹದ ಬಗ್ಗೆ ಮುಂಜಾಗ್ರತೆ ವಹಿಸಿ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

Update: 2025-09-27 21:18 IST

ಡಾ.ಶರಣಪ್ರಕಾಶ್ ಪಾಟೀಲ್

ಕಲಬುರಗಿ: ಕಳೆದ ನಾಲ್ಕು ದಿನಗಳಿಂದ ಸುರಿದ ನಿರಂತರ ಮಳೆಯಿಂದ ಸೇಡಂ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನದಿ ಪ್ರವಾಹ ಉಂಟಾಗಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ವೀಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿ, ಗಂಜಿ ಕೇಂದ್ರ ಸ್ಥಾಪನೆ ಸೇರಿದಂತೆ ತಕ್ಷಣವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.

ಸಟಪಟನಳ್ಳಿ, ಸುರವಾರ, ಬಿಬ್ಬಳ್ಳಿ, ಸಂಗಾವಿ, ಮಳಖೇಡ, ಕರ್ಚಖೇಡ ಗ್ರಾಮಗಳಲ್ಲಿ ನದಿ ಪ್ರವಾಹದಿಂದ ಸಂಚಾರ ಸ್ಥಗಿತಗೊಂಡಿದ್ದು, ವಿಎ ಹಾಗೂ ಪಿಡಿಓಗಳು ಸ್ಥಳಕ್ಕೆ ಹಾಜರಾಗಿ, ತಾಲೂಕಾಡಳಿತಕ್ಕೆ ವರದಿ ಸಲ್ಲಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಹೆಚ್ಚಿನ ಮುಂಜಾಗ್ರತಾ ಸೂಚನೆಗಾಗಿ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದ್ದು, ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರೊಡನೆ ಸಂವಹನ ನಡೆಸಿ ಯಾವುದೇ ಅಹಿತಕರ ಘಟನೆಯಾಗದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿದರು.

ಸೇಡಂ ನಗರದ ಇನ್ಫೋಸಿಸ್ ಕಾಲೋನಿಯಲ್ಲಿ ಮನೆಗಳಿಗೆ ನೀರು ನುಗ್ಗಿರುವುದರಿಂದ, ಪುರಸಭೆ ಆಡಳಿತ ಮತ್ತು ಸ್ಥಳೀಯ ಅಧಿಕಾರಿಗಳು ವ್ಯವಸ್ಥೆ ಸುಧಾರಣೆ ನಡೆಸಿದ್ದಾರೆ. ಚಿಂಚೋಳಿ-ಸೇಡಂ ಮುಖ್ಯರಸ್ತೆ ಪ್ರವಾಹದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಪೋಲಿಸ್ ಮತ್ತು ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡುವಂತೆ ಸಚಿವರು ಸೂಚಿಸಿದ್ದಾರೆ.

ತಾಲೂಕಾಡಳಿತ ಕಾರ್ಯದೊಂದಿಗೆ ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ್ ಹಾಗೂ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ಭಾಗಿಯಾಗಿ ಪರಿಶೀಲನೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News