ಕಲಬುರಗಿ | ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ
ಕಲಬುರಗಿ: ಅತಿವೃಷ್ಟಿ, ಪ್ರವಾಹ ಮೊದಲಾದ ಪ್ರಕೃತಿ ವಿಕೋಪದಿಂದ ರಾಜ್ಯದ ರೈತರು, ಕೃಷಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ, ಸರ್ಕಾರ ಕೂಡಲೇ ರೈತರ ಪರ ನಿಲ್ಲಬೇಕೆಂದು ಆಗ್ರಹಿಸಿ, ಬಿಜೆಪಿಯ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಶುರುವಾದ ಟ್ರ್ಯಾಕ್ಟರ್ ರ‍್ಯಾಲಿ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯಿತು.
ಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಇರುವ ಪರಿಹಾರ ಹಣ ಕೂಡಲೇ ಬಿಡುಗಡೆಗೊಳಿಸಬೇಕು, ರೈತರ ಪ್ರತಿ ಲೀಟರ್ ಹಾಲಿನ ಪ್ರೋತ್ಸಾಹಧನ 620 ಕೋಟಿ ರೂ. ರಿಲೀಸ್ ಮಾಡಬೇಕು, ಹಾಲಿನ ಪ್ರೋತ್ಸಾಹಧನ 5 ರೂ. ನಿಂದ 7 ರೂ. ಗೆ ಏರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಂಸದ ಡಾ.ಉಮೇಶ್ ಜಾಧವ್, ಈ ಭಾಗದಲ್ಲಿ ಶೇ.100 ರಷ್ಟು ಬೆಳೆಹಾನಿಯಾಗಿದೆ, ಸರ್ಕಾರ ಪರಿಹಾರ ನೀಡುತ್ತಿಲ್ಲ, ಕಬ್ಬಿಗೆ 3,300 ರೂ. ದರ ನಿಗದಿಯಾದರೂ ಸಚಿವರ ಹಸ್ತಕ್ಷೇಪದ ಮೇರೆಗೆ 2,950 ರೂ. ಕೊಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು.
ಪ್ರತಿಭಟನೆಯಲ್ಲಿ ಶಾಸಕ ಅವಿನಾಶ್ ಜಾಧವ್, ಎಂಎಲ್ಸಿ ಶಶೀಲ್ ನಮೋಶಿ, ಮಾಜಿ ಸಚಿವ ಬಾಬುರಾವ್ ಚವ್ಹಾಣ, ದತ್ತಾತ್ರೇಯ ಪಾಟೀಲ್ ರೇವೂರ್, ರೈತ ಮೋರ್ಚಾದ ಗ್ರಾಮಾಂತರ ಅಧ್ಯಕ್ಷ ಬಸವರಾಜ ಮಾಲಿಪಾಟೀಲ್, ಲಿಂಗರಾಜ ಪಟ್ಟಣ, ಗ್ರಾಮಾಂತರ ಅಧ್ಯಕ್ಷ ಅಶೋಕ್ ಬಗಲಿ, ಚಂದು ಪಾಟೀಲ್, ಶರಣಪ್ಪ ತಳವಾರ, ಅಮರನಾಥ್ ಪಾಟೀಲ್, ಅಂಬಾರಾಯ್ ಅಷ್ಟಗಿ, ಸುಧಾ ಹಾಲಕಾಯಿ, ಸಂತೋಷ್ ಹಾದಿಮನಿ, ಅವ್ವಣ್ಣ ಮ್ಯಾಕೇರಿ, ಶಿವಮೂರ್ತಯ್ಯ ಹಿರೇಮಠ್, ಅಶೋಕ್ ಪಾಟೀಲ್, ಶರಣು ಸಜ್ಜನ್, ಸೂರ್ಯಕಾಂತ್ ಡೆಂಗಿ, ಹುಲಿಕಂಠ ತೆಲ್ಲೂರ್, ಮಲ್ಲಣ್ಣ ಕಲಗುರ್ತಿ ಸೇರಿದಂತೆ ಹಲವರು ಇದ್ದರು.