ಕಲಬುರಗಿ | ಬಿಜೆಪಿಯ ಫ್ಯಾಸಿಸ್ಟ್ ಧೋರಣೆ, ಕಾರ್ಪೋರೆಟ್ ನಿಲುವಿನಿಂದ ಶಾಶ್ವತ ತುರ್ತುಪರಿಸ್ಥಿತಿ ಉದ್ಭವ: ಡಾ.ಕೆ.ಪ್ರಕಾಶ
ಕಲಬುರಗಿ: ಇಂದಿರಾ ಗಾಂಧಿ ತನ್ನ ಆಂತರಿಕ ಬಿಕ್ಕಟ್ಟುಗಳ ಕಾರಣದಿಂದ ಮತ್ತು ತುರ್ತು ಪರಿಸ್ಥಿತಿಯ ಅಪಾಯಗಳ ಕಾರಣದಿಂದ ಜನತೆಯ ತೀವ್ರ ಪ್ರತಿರೋಧವನ್ನು ತಣ್ಣಗಾಗಿಸಲು ಬ್ಯಾಂಕ್ ರಾಷ್ಟ್ರೀಕರಣದಂತಹ ನಿರ್ಣಯ ಮಾಡಿತು. ಅಂದುಗೆ ಆರೆಸೆಸ್ಸ್ ತುರ್ತು ಪರಿಸ್ಥಿತಿ ಒಂದು ರಾಷ್ಟ್ರ ಕಟ್ಟುವ ನಿರ್ಣಯವನ್ನು ಬೆಂಬಲಿಸುತ್ತೇವೆ ಎಂದು ಪತ್ರ ಬರೆದ ದಾಖಲೆಗಳು ಸಿಗುತ್ತವೆ. ಈಗ ಅಂದು ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್ ಎಂದು ಹೇಳುತ್ತ ತಾನು ಬೆಂಬಲಿಸಿದ್ದನ್ನು ಮರೆ ಮಾಚುತ್ತದೆ. ಆರೆಸೆಸ್ಸ್ ಸುಳ್ಳನ್ನು ಸತ್ಯವೆಂಬಂತೆ ಪ್ರಚುರ ಪಡಿಸುತ್ತದೆ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ ಹೇಳಿದರು.
ನಗರದ ಮುಹಮ್ಮದ್ ಹಸನ್ ಖಾನ್ ಭವನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಿದ " ತುರ್ತು ಪರಿಸ್ಥಿತಿ ಅಂದು ಇಂದು ಮುಂದಿನ ಸವಾಲುಗಳ" ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಅಂದು ಕಮ್ಯುನಿಸ್ಟ್ ರು ಎಮರ್ಜೆನ್ಸಿ ಬೆಂಬಲಿಸಿದ್ದರು ಎಂಬ ಸುಳ್ಳನ್ನು ಹರಿಯಬಿಡಲಾಗಿದೆ. ಸಿಪಿಐಎಂ ಯಾವತ್ತೂ ಬೆಂಬಲಿಸಿಲ್ಲ ಮಾತ್ರವಲ್ಲ ಸಿಪಿಐಎಂನ ಅನೇಕ ಸಂಗಾತಿಗಳನ್ನು ಬಂಧಿಸಿ ಜೈಲಲ್ಲಿಡಲಾಗಿತ್ತು. ಸಿಪಿಐ ಆರಂಭದಲ್ಲಿ ಬೆಂಲಿಸಿತ್ತು. ಸಿಪಿಐಎಂ ಅಲ್ಲ. 50 ವರ್ಷಗಳ ಹಿಂದೆ ಘೋಷಿತವಾದ ತುರ್ತು ಪರಿಸ್ಥಿತಿ ಇದ್ದರೆ ಇಂದು ನಾವು ಅಘೋಷಿತವಾದ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಅಧಿಕಾರಸ್ಥ ಮತ್ತು ಬಂಡವಾಳ ಶಾಹಿಗಳ ಸಹಕಾರ ಪಡೆಯಲು ಆರೆಸೆಸ್ಸ್ ಅನುಕೂಲಕ್ಕೆ ತಕ್ಕಂತೆ ನಿಲುವುಗಳನ್ನು ಬದಲಾಯಿಸಿ ತನ್ನ ಹಿತಾಸಕ್ತಿಯನ್ನು ಸಾಧಿಸುತ್ತದೆ ಎಂದರು.
ಬಿಜೆಪಿಯ ಫ್ಯಾಸಿಸ್ಟ್ ಧೋರಣೆಯ ಕಾರಣದಿಂದ ಕಾರ್ಪೋರೆಟ್ ಪರವಾದ ನಿಲುವಿನಿಂದಾಗಿ ಶಾಶ್ವತವಾದ ತುರ್ತುಪರಿಸ್ಥಿತಿ ಅನುಭವಿಸಲಾಗುತ್ತಿದೆ. ಹೇಗೆ ಅಂದಿನಿಂದ ಇಂದಿನವರೆಗೆ ರಾಜಕೀಯ ಬದಲಾವಣೆಗೊಂಡಿದೆ ಮತ್ತು ಜನರ ನಿರೀಕ್ಷೆ ಪೂರ್ಣ ಪ್ರಮಾಣದಲ್ಲಿ ಏಕೆ ಪೂರೈಸಲಾಗಲಿಲ್ಲ ಎಂಬುದರ ಬಗ್ಗೆ ಹೇಳಿದರು.
ಪ್ರೊ.ಆರ್. ಕೆ ಹುಡುಗಿ ಮಾತನಾಡಿ, ತುರ್ತು ಪರಿಸ್ಥಿತಿಯ ಹಿನ್ನೆಲೆಯ ಕುರಿತು ಮತ್ತು ಹೇಗೆ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ ಎಂಬುದರ ಬಗ್ಗೆ ಪ್ರಾಸ್ತಾವಿಕವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕೆ ನೀಲಾ ಅಧ್ಯಕ್ಷತೆ ವಹಿಸಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಒಂದು ವರ್ಷ ಹತ್ತು ದಿನಗಳ ಜೈಲುವಾಸ ಅನುಭವಿಸಿದ ಡಾ.ಪ್ರಭು ಖಾನಾಪುರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಕಾ.ಶ್ರೀಮಂತ್ ಬಿರಾದರ್ ನಿರೂಪಿಸಿದರು, ಜಿಲ್ಲಾ ಸಮಿತಿಯ ಸದಸ್ಯರಾದ ಕಾ.ಸಲ್ಮಾನ್ ಖಾನ್ ವಂದಿಸಿದರು. ಕಾರ್ಯಕ್ರಮದಲ್ಲಿ ಹಲವರು ಇದ್ದರು.