ಕಲಬುರಗಿ| ಆ.9ರವರೆಗೆ ಮಾನವ ಹಕ್ಕುಗಳ ಸಂರಕ್ಷಣೆಯ ಅಭಿಯಾನ : ಎನ್.ಅಪ್ಪಾಜಿ
ಕಲಬುರಗಿ: ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆಯ ಸದಸ್ಯತ್ವ ಅಭಿಯಾನ ಈಗಾಗಲೇ ಆ.4ರಿಂದ ಪ್ರಾರಂಭವಾಗಿದ್ದು, ಇದು ಆ.9ರವರೆಗೆ ನಡೆಯಲಿದೆ. ಇದರ ಸದಸ್ಯತ್ವ ಪಡೆಯುವ ಆಸಕ್ತರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು ಎಂದು ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಅಪ್ಪಾಜಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನ ಜಿಲ್ಲೆಯ ಎಲ್ಲ ತಾಲೂಕು ಸೇರಿದಂತೆ ಗ್ರಾಮೀಣ ಭಾಗದಲ್ಲೂ ನಡೆಯಲಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದಸ್ಯತ್ವ ಪಡೆದುಕೊಳ್ಳಬೇಕು. ಅದಕ್ಕಾಗಿ ಆಧಾರ್ ಕಾರ್ಡ್, ಫೋಟೋ ಮತ್ತು ಶುಲ್ಕ ಪಾವತಿಸಿ ನೋಂದಣಿ ಮಾಡಬೇಕು ಎಂದರು.
ನಮ್ಮ ಸಂಸ್ಥೆ ಮಾನವ ಹಕ್ಕುಗಳ ಸಂರಕ್ಷಣೆ, ಅನ್ಯಾಯಕ್ಕೆ ಒಳಗಾದವರಿಗೆ ನೆರವು, ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುತ್ತಿದೆ. ಸಂಘದಡಿ ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರ ವಿಭಾಗ ಆರಂಭಿಸಲಾಗಿದೆ. ಆ ಮೂಲಕ ನಮ್ಮ ಸಂಸ್ಥೆಯ ಸದಸ್ಯರು, ಆಸಕ್ತರಿಗೆ ಮಾಹಿತಿ ಹಕ್ಕು ಅಧಿನಿಯಮ ಹಾಗೂ ಸಕಾಲ ಸೇವೆಗಳ ಬಗೆಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಗಿರಿಮಲ್ಲಪ್ಪ ಮೂರ್ತಿ, ಉಪಾಧ್ಯಕ್ಷ ಕಲ್ಲಿನಾಥ ತಳಕೇರಿ, ರಾಯಚೂರು ಜಿಲ್ಲಾಧ್ಯಕ್ಷ ಸೈಯದ್ ಮೆಹಬೂಬ್, ಯಾದಗಿರಿ ಜಿಲ್ಲಾಧ್ಯಕ್ಷ ಸಿದ್ದು ಪೂಜಾರಿ, ಮೈಲಾರಿ ದೊಡ್ಡಮನಿ ಸೇರಿದಂತೆ ಇತರರಿದ್ದರು.