ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಆರೋಪ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಪ್ರಕರಣ ದಾಖಲು
ಮಣಿಕಂಠ ರಾಠೋಡ್
ಕಲಬುರಗಿ : ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ನ್ಯಾಯಲಯದ ಆದೇಶದಂತೆ ಚಿತ್ತಾಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಣಿಕಂಠ ರಾಠೋಡ್ ವಿರುದ್ಧ ಇಲ್ಲಿನ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ನಗರದ ಸಾಮಾಜಿಕ ಕಾರ್ಯಕರ್ತ ಸಿದ್ಧಾರೂಢ ಎಂಬುವವರ ದೂರನ್ನು ಆಧರಿಸಿ ಕಲಂ 352, 351(2),(3) ಬಿ.ಎನ್.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಬಗ್ಗೆ ಮಾತನಾಡಿದಕ್ಕೆ ಇತ್ತೀಚೆಗೆ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, 'ಇಂದು ಬೆದರಿಕೆ ಕರೆಗಳು ಬರುತ್ತಿವೆ, ನಾಳೆ ನಿಮ್ಮ ಮನೆವರೆಗೂ ಬರಬಹುದು' ಎಂಬ ಹೇಳಿಕೆ ನೀಡಿದ್ದರು.
ಇಂತಹ ಹೇಳಿಕೆಗೆ ಸಚಿವರ ಪ್ರಾಣಕ್ಕೆ ಅಪಾಯ ಹೆಚ್ಚಾಗುವ ಸಂಭವ ಮತ್ತು ಕೋಮು ಗಲಭೆಗೆ ಅವಕಾಶ ಕೊಟ್ಟಂತೆ ಆಗುತ್ತದೆ ಎಂದು ಆರೋಪಿಸಿ ಕಾನೂನು ಪ್ರಕಾರ ಕ್ರಮ ಕೈಗೊಂಡು ರಾಜ್ಯದಿಂದ ಶಾಶ್ವತ ಗಡಿಪಾರು ಮಾಡಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.