ಕಲಬುರಗಿ | ವಿವಿಧ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ, ಜೆಜೆಎಂ ಕಾಮಗಾರಿ ವೀಕ್ಷಿಸಿದ ಸಿಇಓ ಭಂವರ್ ಸಿಂಗ್ ಮೀನಾ
ಕಲಬುರಗಿ: ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಶುಕ್ರವಾರ ಶಹಾಬಾದ್ ತಾಲೂಕಿನ ಮುಗಳನಾಗಾಂವ, ಮರತೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲ್ದಿಹಾಳ, ಭಂಕೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ತರಿತಾಂಡಾ ಮತ್ತು ಶೇವಾನಗರ ವಾಡಾ ತಾಂಡಾ ಹಾಗೂ ರಾವೂರ ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ ಜೆಜೆಎಂ ಕಾಮಗಾರಿಗಳನ್ನು ಪರಿಶೀಲಿಸಿದರು.
ನಂತರ ಅವರು ರಾವೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿಡಿ, ಶಾಲೆಯಲ್ಲಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.
ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಬರುವಂತೆ ಶಾಲೆಯ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಸಹ ಕಾರ್ಯಪ್ರವೃತ್ತರಾಗಬೇಕು. ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಾಗಿ ನಿಗದಿತ ಸಮಯದೊಳಗೆ ಪಠ್ಯಕ್ರಮ ಪೂರ್ಣಗೊಳಿಸಿ, ಪುನಾರಾವರ್ತನೆ ಮಾಡುವ ಮೂಲಕ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಹೆಚ್ಚಳ ಮಾಡಲು ಕ್ರಮ ವಹಿಸಲು ಸೂಚಿಸಿದರು.
ರಾವೂರ ಗ್ರಾಮದ ಕೂಸಿನ ಮನೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅದೇ ರೀತಿ ಚಿತ್ತಾಪೂರ ತಾಲೂಕಿನ ಕಮರವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಲಹಳ್ಳಿ ಹಾಗೂ ಆಲೂರ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಜೆಜೆಎಂ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕಾಳಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ, ಚಿಂಚೋಳಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ ಸೇರಿದಂತೆ ಸಂಬಂಧಪಟ್ಟ ತಾಲೂಕು ಪಂಚಾಯತ್‍ನ ಅಧಿಕಾರಿಗಳು/ಸಿಬ್ಬಂದಿ ಹಾಗೂ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.