×
Ad

ಕಲಬುರಗಿ | ಅಧಿಕಾರಿಗಳು ಸಂಘಟಿತರಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಬಾಲ್ಯ ವಿವಾಹ ತಡೆಯಲು ಸಾಧ್ಯ : ನಾಗಣಗೌಡ ಕೆ.

Update: 2025-02-28 16:30 IST

ಕಲಬುರಗಿ : ರಾಜ್ಯದಲ್ಲಿ ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹ ತಡೆಯಬೇಕೆಂದೆರೆ ಮಕ್ಕಳ ಸಂಬಂಧಿತ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದು ತುಂಬಾ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣಗೌಡ ಕೆ. ಹೇಳಿದರು.

ಶುಕ್ರವಾರ ಇಲ್ಲಿನ ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098, ಗುಲಬರ್ಗಾ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಕಲಬುರಗಿ ವಿಭಾಗದ 7 ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಲ್ಯಾಣ ಕರ್ನಾಟಕದಲ್ಲಿ ಮಕ್ಕಳ ಸ್ಥಿತಿ ಗತಿ, ಶಾಲೆಯಿಂದ ಹೊರಗುಳಿದ ಮಕ್ಕಳು, ಮಕ್ಕಳ ಭಿಕ್ಷಾಟನೆ ಹಾಗೂ ಅನಧಿಕೃತ ಕೋಚಿಂಗ್ ಸೆಂಟರ್ಗಳ ಕುರಿತು ಆಯೋಜಿಸಿದ ವಿಭಾಗ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ತಡೆಯುವುದು ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಗೆ ಗುತ್ತಿಗೆ ಕೊಟ್ಟಿಲ್ಲ. ಬಾಲ್ಯ ವಿವಾಹ ತಡೆಯಲು ಸರ್ಕಾರ ಸೂಚಿಸಿದ ಪ್ರತಿಯೊಬ್ಬ ಅಧಿಕಾರಿ ಸಕ್ರಿಯವಾಗಿ ಭಾಗವಹಿಸಬೇಕಿದೆ. ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಶಿಕ್ಷಕರು, ವಿಎ, ಪಿಡಿಓ ಗಳಿಗೆ ಮಾಹಿತಿ ಇಲ್ಲದೆ ಹಳ್ಳಿಯಲ್ಲಿ ಬಾಲ್ಯ ವಿವಾಹ ನಡೆಯುವುದಿಲ್ಲ. ಹೀಗಾಗಿ ಮುಂಚಿತವಾಗಿ ಫೋಷಕರನ್ನು ಸಮಾಲೋಚಿಸಿ ಕಾಯ್ದೆ ಬಗ್ಗೆ ಅರಿವು ನೀಡಿದಲ್ಲಿ ಇದನ್ನು ತಡೆಯಬಹುದಾಗಿದೆ. ಇಲ್ಲದೆ ಹೋದಲ್ಲಿ ಬಾಲಕನಿಗೆ ಅದು ಜೈಲ್ ಮ್ಯಾರೇಜ್ ಆಗುತ್ತದೆ ಎಂದರು.

ಇಂದು ಎಲ್ಲಾ ವಲಯದಲ್ಲಿ ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಕಾಣುತ್ತಿದ್ದೇವೆ. ರಕ್ಷಕರೆ ಭಕ್ಷರಾಗುತ್ತಿರುವುದು ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ನಿರ್ಭಯಾ ಪ್ರಕರಣದ ನಂತರ ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಅನೇಕ ಕಾನೂನು ಕಾಯ್ದೆಗಳು ಬಂದಿವೆ. ಮಕ್ಕಳು ರಾಷ್ಟ್ರದ ಆಸ್ತಿಯಾಗಿದ್ದು, ಅವರ ಸಂರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ಪ್ರತಿಪಾದಿಸಿದರು.

ಹಳ್ಳಿಯಲ್ಲಿ ಕಣ್ಗಾವಲು ಸಮಿತಿ ಚುರುಕಾಗಿ ಕಾರ್ಯನಿರ್ವಹಿಸಲಿ :

ಗ್ರಾಮ ಪಂಚಾಯತ್, ಹಳ್ಳಿ ಮಟ್ಟದಲ್ಲಿ ಮಹಿಳೆಯರ ಮತ್ತು ಮಕ್ಕಳ ಕಣ್ಗಾವಲು ಸಮಿತಿ ಕಾರ್ಯಾ ಚಟುವಟಿಕೆ ತೀವ್ರಗೊಳಿಸುವ ಅಗತ್ಯವಿದ್ದು, ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರಿಗೆ ಡಸಿ ಅವರು ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದು ನಾಗನಗೌಡ ಕೆ. ಒತ್ತಿ ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದ 6 ಲಕ್ಷ ಸೇರಿ ರಾಜ್ಯದಾದ್ಯಂತ 26 ಲಕ್ಷ ಶಾಲಾ ಮಕ್ಕಳ ಶಿಕ್ಷಣ ಇಲಾಖೆಯ ಸ್ಯಾಟ್ಸ್ ನಲ್ಲಿ ಆಧಾರ್ ಮೌಲ್ಯಕರಣ ಇಲ್ಲದಿರುವುದಕ್ಕೆ ಅವರಿಗೆ ವಿದ್ಯಾರ್ಥಿ ವೇತನ ಪಾವತಿಯಾಗುತ್ತಿಲ್ಲ. ಕೂಡಲೆ ಇದನ್ನು ಸರಿಪಡಿಸಿ ಎಂದು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಡಿಡಿಪಿಐ ಗಳಿಗೆ ಕಳೆದ ಜ.21 ರಂದು ಪತ್ರ ಬರೆದಿದ್ದಾರೆ. ಪತ್ರ ಬರೆದು ತಿಂಗಳಾದರು ಸಮಸ್ಯೆ ನೀಗಿಲ್ಲ. ಮೂಲಭೂತ ಹಕ್ಕಾದ ಶಿಕ್ಷಣ ಪಡೆಯಲು ಮಕ್ಕಳಿಗೆ ಇಷ್ಟೊಂದು ತೊಂದರೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

1929 ರಲ್ಲಿಯೇ ಬಾಲ್ಯ ವಿವಾಹ ನಿಷೇಧ ಕಾಯ್ದೆ ದೇಶದಲ್ಲಿ ಜಾರಿಯಲ್ಲಿದ್ದರೂ ಇಂದಿಗೂ ಬಾಲ್ಯ ವಿವಾಹ ಪ್ರಕರಣ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರಕರಣ ಸಾರ್ವಜನಿಕವಾಗಿ ಬೆಳಕಿಗೆ ಬಂದ ನಂತರ ಆಯೋಗ ಹೇಳಿದ ಮೇಲೆ ಪ್ರಕರಣ ದಾಖಲಿಸುವುದಾದರೆ ಅಧಿಕಾರಿಗಳಿಗೆ ನೈತಿಕ ಜವಾಬ್ದಾರಿ ಇಲ್ವಾ ಎನ್ನುವ ಪ್ರಶ್ನೆ ಮೂಡುತ್ತದೆ. ಮಕ್ಕಳ ವಿಷಯದಲ್ಲಿ ಚೆಲ್ಲಾಟವನ್ನು ಆಯೋಗ ಸಹಿಸಲ್ಲ ಎಂದ ಎಚ್ಚರಿಕೆಯ ಮಾತುಗಳನ್ನಾಡಿದರು.

ಮಕ್ಕಳಿಗೆ ಮನೆ ನಂತರ ಶಾಲೆ ಅತ್ಯಂತ ಸುರಕ್ಷಿತ ಸ್ಥಳ ಎಂದು ನಾವು ಭಾವಿಸಿದ್ದೇವೆ. ಅದರೆ ಶಿಕ್ಷಕರು, ಮುಖ್ಯ ಗುರುಗಳು, ವಾಹನ ಚಾಲಕರು, ಜವಾನ್ ಹೀಗೆ ಶಾಲಾ ಸಿಬ್ಬಂದಿಗಳಿಂದಲೆ ರಾಜ್ಯದಾದ್ಯಂತ 3,800 ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಕ್ಷಕರೇ ಭಕ್ಷಕರಾದರೆ ಮಕ್ಕಳು ಎಲ್ಲಿಗೆ ಹೋಗಬೇಕು. ನೊಂದವರಿಗೆ ನ್ಯಾಯ ಒದಗಿಸುವ ಕೆಲಸ ಜವಾಬ್ದಾರಿಯುತ ಅಧಿಕಾರಿಗಳು ಮಾಡಬೇಕಿದೆ. ಇಲ್ಲದೆ ಹೋದರೆ ಇದು ಆತ್ಮ ವಂಚನೆ ಮಾಡಿದಂತಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವದ ಈ ಕಾಲದಲ್ಲಿಯೂ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ಇನ್ನು ನಿರ್ಮೂಲನೆಯಾಗದಿರುವುದು ದುರ್ದೈವದ ಸಂಗತಿ. ಮಕ್ಕಳ ಹಕ್ಕುಗಳು ಕುರಿತು ಜನಸಮುದಾಯಕ್ಕೆ ಅರಿವು ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಆಯೋಗದ ಸದಸ್ಯೆ ಅಪರ್ಣಾ ಎಮ್.ಕೊಳ್ಳಾ ಮಾತನಾಡಿದರು.

ನಂತರ ನಡೆದ ಸೆಷನ್ಸ್ ನಲ್ಲಿ ಬೆಂಗಳೂರು ಸಿಐಡಿಯ ಎಸ್.ಜೆ.ಪಿ.ಯು ರೋಹಿತ್ ಸಿ.ಜಿ ಅವರು ಪೋಕ್ಸೋ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಮಕ್ಕಳ ಭಿಕ್ಷಾಟನೆ, ಅನಧಿಕೃತ ಕೋಚಿಂಗ್ ಸೆಂಟರ್ ಗಳ ಕುರಿತು ಉಪನ್ಯಾಸ ನೀಡಿದರು. ಕಲಬುರಗಿ ದಕ್ಷಿಣ ವಲಯದ ಸಿ.ಆರ್.ಸಿ ಪ್ರಕಾಶ ರಾಠೋಡ ಅವರು ಶಾಲೆಯಿಂದ ಹೊರಗುಳಿದ ಮಕ್ಕಳು ಮತ್ತು ಆರ್.ಟಿ.ಇ ಕಾಯ್ದೆ ವಿಷಯದ ಕುರಿತು ಮಾತನಾಡಿದರು.

ಕಾರ್ಯಾಗಾರದಲ್ಲಿ ಆಯೋಗದ ಸದಸ್ಯ ಕಾರ್ಯದರ್ಶಿ ವಾಸಂತಿ ಉಪ್ಪಾರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಶ್ವರಾಧ್ಯ ಕೆ. ಇಜೇರಿ, ಗುಲಬರ್ಗಾ ವಿ.ವಿ. ಕುಲಸಚಿವ ಪ್ರೊ.ರಮೇಶ ಲಂಡನಕರ್, ನಗರ ಪೊಲೀಸ್ ಉತ್ತರ ವಿಭಾಗದ ಎ.ಸಿ.ಪಿ ಚಂದ್ರಶೇಖರ, ರಾಯಚೂರು ಉಪನಿರ್ದೇಶಕ ನವೀನ್ ಯು. ಸೇರಿದಂತೆ ಕಲಬುರಗಿ ವಿಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಮಕ್ಕಳ ಸಂಬಂಧಿತ ಇಲಾಖೆ ಮತ್ತು ಸಂಸ್ಥೆಗಳ ಸುಮಾರು 300 ಜನ ಪ್ರತಿನಿಧಿಗಳು ಭಾಗವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ ಅವರು ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News