×
Ad

ಕಲಬುರಗಿ | ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಷರತ್ತುಬದ್ಧ ಅನುಮತಿ; ಆಂದೋಲಾಶ್ರೀ ಗೆ ಅವಕಾಶ ನಿರಾಕರಣೆ

Update: 2025-02-25 18:10 IST

ಕಲಬುರಗಿ : ಆಳಂದ ಪಟ್ಟಣದಲ್ಲಿರುವ ಭಾವೈಕ್ಯತೆಯ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ, ಷರತ್ತುಬದ್ಧವಾಗಿ 15 ಮಂದಿಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಶಿವಲಿಂಗ ಪೂಜೆಗೆ ವಿವಾದಕ್ಕೆ ಸಂಬಂಧಿಸಿದಂತೆ ಹಿಂದುತ್ವ ಸಂಘಟನೆಗಳ ಅರ್ಜಿಯನ್ನು ಪುರಸ್ಕರಿಸಿದೆ. ಆದರೆ ಈ ಆದೇಶದಲ್ಲಿ ಆಂದೋಲಾದ ಸಿದ್ದಲಿಂಗ ಸ್ವಾಮೀಜಿಗೆ ಪೂಜೆಯಲ್ಲಿ ಭಾಗವಹಿಸಬಾರದು ಎಂದು ಆದೇಶ ನೀಡಿದೆ.

ಶಿವರಾತ್ರಿ ನಿಮಿತ್ತ ಶಿವಲಿಂಗ ಪೂಜೆಗೆ ಅನುಮತಿ ನೀಡುವಂತೆ ಹಿಂದುತ್ವ ಸಂಘಟನೆಗಳು ಕಲಬುರಗಿ ನ್ಯಾಯಾಲಯದ ಕದ ತಟ್ಟಿದ್ದವು. ಈ ಮೇರೆಗೆ ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಫೆ.26ರಂದು ಮಧ್ಯಾಹ್ನ 2 ರಿಂದ ಸಂಜೆ 6ರವರೆಗೆ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಕೆಗೆ ಷರತ್ತುಬದ್ಧ ಅನುಮತಿ ನೀಡಿ, ಆದೇಶ ಪ್ರಕಟಿಸಿದೆ.

ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಅವರನ್ನು ಹೊರತುಪಡಿಸಿ ಅರ್ಜಿದಾರ ಸಿದ್ರಾಮಯ್ಯ ಹಿರೇಮಠ ಸೇರಿ 15 ಜನರಿಗೆ ಶಿವಲಿಂಗ ಪೂಜೆಗೆ ಅವಕಾಶ ನೀಡಿದೆ, ಅದರಲ್ಲಿ ಜಿಲ್ಲಾಡಳಿತಕ್ಕೆ 15 ಮಂದಿಯ ಆಧಾರ್ ಕಾರ್ಡ್ ಸಹಿತ ಪಟ್ಟಿಯನ್ನು ನೀಡಲು ಕೋರ್ಟ್ ಹೇಳಿದೆ.

ಕಳೆದ ವರ್ಷ ಶಿವರಾತ್ರಿ ಹಬ್ಬದಂದೇ ಉರೂಸ್ ನಡೆದಿತ್ತು. ಆ ಸಂದರ್ಭದಲ್ಲಿ ಹಿಂದೂ ಹಾಗೂ ಮುಸ್ಲಿಮ್ ಭಾಂಧವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿ ಆದೇಶಿಸಿತ್ತು.

ಚೈತ್ಯನ್ಯ ಶಿವಲಿಂಗಕ್ಕೆ ಪೂಜೆ; ಪೊಲೀಸ್ ರಿಂದ ರೂಟ್ ಮಾರ್ಚ್ :

ಶಿವರಾತ್ರಿಯಂದು ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದ ಆವರಣದಲ್ಲಿರುವ ರಾಘವ ಚೈತ್ಯನ್ಯ ಶಿವಲಿಂಗಕ್ಕೆ ಹಿಂದೂ ಸಮುದಾಯದವರು ಪೂಜೆ ಸಲ್ಲಿಸಲಿದ್ದು, ಈ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇನ್ನೊಂದೆಡೆ ಆಳಂದ ಪಟ್ಟಣದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಲು ಮತ್ತು ಜನ ಸಾಮಾನ್ಯರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ನೂರಾರು ಜನ ಸಿಬ್ಬಂದಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸೋಮವಾರ ಸಂಜೆ ಪಥ ಸಂಚಲನ ನಡೆಸಿದರು.

ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರಾಯಿ ಮಾರಾಟ ನಿಷೇಧಿಸಿ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News