ಕಲಬುರಗಿ | ಹೃದಯಾಘಾತ, ತುರ್ತು ಚಿಕಿತ್ಸೆಗೆ ಸಿಪಿಆರ್ ತರಬೇತಿ
ಕಲಬುರಗಿ: ಇತ್ತೀಚೆಗೆ ಹಠಾತ್ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಡಿಯೋಪಲ್ಮನರಿ ರಿಸಸಿಟೇಶನ್ (CPR) ಹಾಗೂ ತುರ್ತು ಚಿಕಿತ್ಸಾ ಕ್ರಮಗಳ ಕುರಿತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಲ್ಲಾ ಶಾಲಾ-ಕಾಲೇಜುಗಳ ಉಪನ್ಯಾಸಕರು ಮತ್ತು ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಅವರ ಜನ್ಮ ದಿನದ ಅಂಗವಾಗಿ, ಸಂಸ್ಥೆಯ ಕ್ಯೂಎಸಿ ವತಿಯಿಂದ ಎಂ.ಆರ್.ಎಂ.ಸಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಯಿತು. ಸುಮಾರು 50 ಸಿಬ್ಬಂದಿಗೆ ಡಾ.ಸಿದ್ಧರಾಮೇಶ ಗಡಿ, ಡಾ.ಸೋಹೈಲ್, ಡಾ.ರೇಷ್ಮಾ ದೇವಣಿ ಮತ್ತು ಡಾ.ಅಪೂರ್ವ ನಮೋಶಿ ತರಬೇತಿ ನೀಡಿದರು.
ಜೀವ ಉಳಿಸುವ ಪ್ರಾಯೋಗಿಕ ತಂತ್ರ :
ತರಬೇತಿಯಲ್ಲಿ ಹೃದಯಾಘಾತ ಸಂದರ್ಭಗಳಲ್ಲಿ ಜೀವ ಉಳಿಸುವ CPR ವಿಧಾನ, ಪ್ರಥಮ ಚಿಕಿತ್ಸೆ, ಎಚ್ಚರಿಕೆಯ ಚಿಹ್ನೆಗಳನ್ನು ಗುರುತಿಸುವುದು, ತಕ್ಷಣ ಕ್ರಮ ಕೈಗೊಳ್ಳುವುದು ಮತ್ತು ವೈದ್ಯಕೀಯ ನೆರವು ಬರುವವರೆಗೆ ಆರೈಕೆ ನೀಡುವುದು ಕುರಿತು ಪ್ರಾಯೋಗಿಕ ಪ್ರದರ್ಶನ ಜರುಗಿತು.
“CPR ಹೃದಯ ಸ್ತಂಭನವಾದ ಕೂಡಲೇ ವ್ಯಕ್ತಿಯ ಜೀವ ಉಳಿಸಲು ಮಹತ್ವದ್ದಾಗಿದೆ” ಎಂದು ವೈದ್ಯರು ತಿಳಿಸಿದರು.
ಕಾರ್ಯಕ್ರಮದಲ್ಲಿ ಡೀನ್ ಡಾ.ಶರಣಗೌಡ ಪಾಟೀಲ್, ವೈಸ್ ಡೀನ್ ಡಾ.ವಿಜಯಕುಮಾರ್ ಕಪ್ಪಿಕೇರಿ, ಕ್ಯೂಎಸಿ ಮುಖ್ಯಸ್ಥೆ ಡಾ.ಉಮಾ ರೇವೂರ, ಡಾ.ಸಾಗರ ಜಂಬಗಿ ಸೇರಿದಂತೆ ಹಲವು ಸಿಬ್ಬಂದಿ ಹಾಜರಿದ್ದರು.