ಕಲಬುರಗಿ | ಅತಿವೃಷ್ಟಿಯಿಂದ ಬೆಳೆ ಹಾನಿ : ರೈತರ ಸಾಲ ಮನ್ನಕ್ಕೆ ನಿಖಿಲ್ ಕುಮಾರಸ್ವಾಮಿ ಆಗ್ರಹ
ಕೇಂದ್ರದಿಂದ ವಿಶೇಷ ಆರ್ಥಿಕ ನೆರವಿಗೆ ಎಚ್.ಡಿ.ಕುಮಾರಸ್ವಾಮಿ ಭರವಸೆ
ಕಲಬುರಗಿ: ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ ಮತ್ತು ಪ್ರವಾಹದಿಂದ ವ್ಯಾಪಕ ಬೆಳೆ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕಲಬುರಗಿಯ ಎಪಿಎಂಸಿ ಮಾರುಕಟ್ಟೆಯ ಬಳಿ ರೈತರೊಂದಿಗೆ ಸಂವಾದ ವೇಳೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಈ ಬಾರಿ ಅತಿವೃಷ್ಟಿಯಿಂದ ರಾಜ್ಯದಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಇಷ್ಟದರೂ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮಾಡುವುದು ಬಿಟ್ಟರೆ ಬೇರೆ ಏನು ಮಾಡಿಲ್ಲ. ಬೆಳೆ ಹಾನಿ ಪ್ರದೇಶಕ್ಕೆ ಯಾರು ಭೇಟಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತಿವೃಷ್ಟಿಯಿಂದ ಹಾನಿಗೊಳಗಾದ ಒಂದೇ ಒಂದು ಪ್ರದೇಶಕ್ಕೂ ಸಿಎಂ ಇದುವರೆಗೂ ಭೇಟಿ ನೀಡಿಲ್ಲ. ರಾಜ್ಯದ ಕೃಷಿ ಸಚಿವರಂತೂ ಅವರ ಮತಕ್ಷೇತ್ರ ಬಿಟ್ಟು ಹೊರಗೆ ಬಂದೇ ಇಲ್ಲ. ಕಲಬುರಗಿ ಜಿಲ್ಲೆಗಳನ್ನು ಕೃಷಿ ಸಚಿವರು ಮರತೇ ಬಿಟ್ಟಿದ್ದಾರೆ. ಈ ಭಾಗದಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದರೂ ಸಹ ಕೃಷಿ ಸಚಿವರು ಭೇಟಿ ನೀಡಿಲ್ಲ ಎಂದರು.
ಈ ವಿಚಾರದಲ್ಲಿ ಆ ಸರಕಾರ ಈ ಸರಕಾರ ಎನ್ನದೇ ಹಾನಿಗೊಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ಕೊಡಬೇಕಿದೆ. ಈ ದಿಕ್ಕಿನಲ್ಲಿ ಎಲ್ಲರೂ ಒಂದಾಗಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಮುಂಗಾರು ಮಳೆಯ ಅತಿವೃಷ್ಟಿಯಿಂದ ಲಕ್ಷಾಂತರ ಹೆಕ್ಟರ್ ಪ್ರದೇಶದಲ್ಲಿ ರೈತರ ಬೆಳೆ ನಷ್ಟವಾಗಿದ್ದು, ನೆರೆಹಾನಿಯಿಂದ ಜನಸಾಮಾನ್ಯರು ಸಹ ಮನೆಗಳನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನೆರವಿಗೆ ಧಾವಿಸದೆ, ಪರಿಹಾರಗಳನ್ನು ಒದಗಿಸಿದೆ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿದರು.
ಕೇಂದ್ರದಿಂದ ವಿಶೇಷ ಆರ್ಥಿಕ ನೆರವಿಗೆ ಎಚ್.ಡಿ.ಕುಮಾರಸ್ವಾಮಿ ಭರವಸೆ :
ರಾಜ್ಯದ ನೆರೆಹಾನಿ ಪ್ರದೇಶಗಳ ರೈತರು, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜನತಾದಳ ಪಕ್ಷದ ವತಿಯಿಂದ ಹಮ್ಮಿಕೊಂಡ ರಾಜ್ಯ ಪ್ರವಾಸದ ಭಾಗವಾಗಿ ಸೋಮವಾರ ಕಲಬುರಗಿಯ ಎಪಿಎಂಸಿ ಯಾರ್ಡ್ ನಲ್ಲಿ ರೈತರೊಂದಿಗೆ ಸಂವಾದ ನಡೆಸಿ, ಅತಿವೃಷ್ಟಿಯಿಂದ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ರೈತರ ಮೂಲಕವೇ ನಿಖಿಲ್ ಕುಮಾರಸ್ವಾಮಿ ಅವರು ಮಾಹಿತಿ ಪಡೆದರು.
ಇದೇ ವೇಳೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ರೈತ ಸಂವಾದದಲ್ಲಿ ದೂರವಾಣಿ ಮೂಲಕ ಮಾತನಾಡಿ, ಕಲಬುರಗಿ ರೈತರಿಗೆ ನನ್ನ ನಮಸ್ಕಾರಗಳು, ರೈತರ ಸಂಕಷ್ಟವನ್ನು ನಾನು ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ನಮ್ಮ ರೈತರು ಅದರಲ್ಲೂ ಕಲಬುರಗಿ ಮತ್ತು ಬೀದರ್ ಭಾಗದಲ್ಲಿ ಭಾರಿ ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳು ಸಂಪೂರ್ಣ ಹಾಳಾಗಿದೆ. ಇದರ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದೇನೆ ಎಂದರು.
ನನಗೆ ಬೆಳೆ ಹಾನಿಯ ಸಂಪೂರ್ಣ ಮಾಹಿತಿಯ ಮನವಿ ಪತ್ರವನ್ನು ನೀಡಿ, ನಾನು ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ ವಿಶೇಷ ಆರ್ಥಿಕ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.
ರೈತ ಸಂವಾದದಲ್ಲಿ ಹಲವಾರು ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ, ಕೃಷ್ಣ ರೆಡ್ಡಿ, ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ, ಶಿವಕುಮಾರ್ ನಾಟೀಕಾರ, ಬಸಾರಾಜ ಬೀರಬಟ್ಟೆ, ಶ್ಯಾಮರಾವ್ ಸೂರನ್, ಪ್ರವೀಣ್ ಜಾಧವ್, ಸೇರಿದಂತೆ ಮತ್ತಿತರರು ಇದ್ದರು.