ಕಲಬುರಗಿ | ಸಿಯುಕೆ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ತನಿಖೆಯಲ್ಲಿದೆ : ಕುಲಸಚಿವ ಆರ್.ಆರ್.ಬಿರಾದಾರ್
ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿ ಸಮೀಪದಲ್ಲಿರುವ ಕೇಂದ್ರೀಯ ವಿವಿಯ ಭೂಗರ್ಭಶಾಸ್ತ್ರ ವಿಭಾಗದಲ್ಲಿ ಬಿಎಸ್ಸಿ ಓದುತ್ತಿದ್ದ ವಿದ್ಯಾರ್ಥಿನಿ ಜಯಶ್ರೀ ನಾಯಕ ಆತ್ಮಹತ್ಯೆ ಪ್ರಕರಣವು ತನಿಖೆಯ ಹಂತದಲ್ಲಿದೆ ಎಂದು ವಿವಿಯ ಕುಲಸಚಿವ ಆರ್.ಆರ್.ಬಿರಾದಾರ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವಿದ್ಯಾರ್ಥಿನಿ ಜಯಶ್ರೀ ನಾಯಕ ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ. ವಿದ್ಯಾರ್ಥಿನಿಯ ಸಾವಿಗೆ ಕಾರಣವೆನೆಂಬುದರ ಬಗ್ಗೆ ಅನೇಕ ಉಹಾಪೋಹಕ ವರದಿಗಳು ಬರುತ್ತಿವೆ. ಸದ್ಯ ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಸತ್ಯಾಂಶ ಹೊರಬಂದ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಈಗಾಗಲೇ ವಿದ್ಯಾರ್ಥಿನಿಯ ಮೊಬೈಲ್ ಹಾಗು ಅವಳಿಗೆ ಸಂಬಂಧಿಸಿದ ಕೆಲವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದಲ್ಲದೆ ವಿದ್ಯಾರ್ಥಿನಿಯ ಮೊಬೈಲ್‌ನ ಒಳ ಮತ್ತು ಹೊರಹೊದ ಕರೆಗಳ ವಿವರಗಳನ್ನೂ ಪಡೆದಿದ್ದಾರೆ. ವಿವಿಧ ಅಧಿಕಾರಿಗಳು ಸಹ ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದಿದ್ದಾರೆ. ಇದರೊಂದಿಗೆ ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳ ಕಚೇರಿ, ವಿದ್ಯಾರ್ಥಿಯ ವಸತಿನಿಲಯದ ಹಾಗು ಊಟ ಮಾಡುವ ವಸತಿನಿಲಯದ ಸಿ.ಸಿ ಟಿವಿ ಫೂಟೇಜ್‌ಗಳನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕೆಲ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರವಾಗಿದೆ. ಯಾರಿಗಾದರೂ ಲೈಂಗಿಕ ಹಿಂಸೆ ಅಥವಾ ಕಿರುಕುಳವಾದರೆ ದೂರು ಸಲ್ಲಿಸಲು ಹಾಗು ಅದರ ಕುರಿತು ವಿಚಾರಣೆ ಮಾಡಲು ಆಂತರಿಕ ದೂರು ಸಮಿತಿ (ಐಸಿಸಿ) ಇದೆ. ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಿಗೆ ಈ ಕುರಿತು ಯಾವುದೇ ಅಧಿಕಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿನಿ ಜೀವಂತವಿದ್ದರೇ ಅವಳನ್ನು ರಕ್ಷಿಸಬೇಕೆಂಬ ಸದುದ್ದೇಶದಿಂದ ಭದ್ರತಾ ಅಧಿಕಾರಿ ವಿದ್ಯಾರ್ಥಿನಿಯ ಕೋಣೆಯ ಬಾಗಿಲನ್ನು ಮುರಿದು ತೆಗೆದಿರುತ್ತಾರೆ. ಆ ಸಂದರ್ಭದಲ್ಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಉಪಸ್ಥಿತರಿರಲಿಲ್ಲ. ವಸತಿ ನಿಲಯದ ಮೇಲ್ವಿಚಾರಕರು ಮತ್ತು ಆ ಕೊಣೆಯಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿನೀಯರ ಸಮ್ಮುಖದಲ್ಲಿ ಕೋಣೆಯ ಬಾಗಿಲನ್ನು ಮುರಿಯಲಾಗಿದೆ. ತಕ್ಷಣ ವೈದ್ಯಾಧಿಕಾರಿಗಳು ಆಗಮಿಸಿ ಜೀವ ಹೋಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ತಿಳಿಸಿರುತ್ತಾರೆ. ತಕ್ಷಣ ಮಾಹಿತಿಯನ್ನು ಪೋಲಿಸರಿಗೆ ಮತ್ತು ವಿದ್ಯಾರ್ಥಿನಿಯ ಪಾಲಕರಿಗೆ ತಿಳಿಸಲಾಗಿದೆ ಎಂದು ವಿವರಿಸಿದ್ದಾರೆ.
ಸಾವಿನ ತನಿಖೆ ಪ್ರಗತಿಯಲ್ಲಿರುವಾಗ ಕೆಲ ವ್ಯಕ್ತಿಗಳು ಉಹಾ-ಪೋಹಕ ಮಾಹಿತಿಗಳನ್ನು ಹಾಗೂ ತನಿಖೆಯನ್ನು ದಿಕ್ಕು ತಪ್ಪಿಸುವಂತಹ ಮಾಹಿತಿಗಳನ್ನು ವಿವಿಧ ಮಾಧ್ಯಮಗಳ ಮೂಲಕ ಹರಡುವ ಪ್ರಯತ್ನ ಮಾಡುತ್ತಿದ್ದಾರೆ. ವಿಶ್ವ ವಿದ್ಯಾಲಯದ ಘನತೆಗೆ ದಕ್ಕೆ ತರುವಂತಹ ಈ ಕೃತ್ಯವನ್ನು ವಿಶ್ವ ವಿದ್ಯಾಲಯವು ಖಂಡಿಸುತ್ತದೆ ಹಾಗೂ ಪೋಲಿಸರು ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ ಎಂದ ಅವರು, ಸಾವಿನ ತನಿಖೆಗೆ ವಿವಿಯು ಸಂಪೂರ್ಣ ಸಹಕಾರ ನೀಡಲಿದೆ ಎಂದಿದ್ದಾರೆ.