ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆಗೆ ನಿಂದನೆ ಖಂಡಿಸಿ ದಲಿತ ಸೇನೆ ವತಿಯಿಂದ ಪ್ರತಿಭಟನೆ
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನಿಂದಿಸಿರುವ ಆರೆಸ್ಸೆಸ್ ಹಾಗೂ ಅದರ ಅಂಗ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸೇನೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇಲ್ಲಿನ ಜಗತ್ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಅನ್ನಪೂರ್ಣ ಕ್ರಾಸ್ ನಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಹಾದು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.
ಈ ಸಂದರ್ಭದಲ್ಲಿ ದಲಿತ ಸೇನೆಯ ಪದಾಧಿಕಾರಿಗಳು, ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಟೈರ್ ಸುಡುವ ಮೂಲಕ ಆರೆಸ್ಸೆಸ್ ಸಂಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವರು, ಇತ್ತೀಚೆಗೆ ಸುಪ್ರೀಂಕೋರ್ಟಿನ ನ್ಯಾಯಾಧೀಶರಿಗೆ ಅಪಮಾನ ಎಸಗಲಾಯಿತು. ಹರಿಯಾಣದ ಎಡಿಜಿಪಿ ಪುರಣಕುಮಾರ್ ಆತ್ಮಹತ್ಯೆಯ ಹಿಂದೆ ಮನುವಾದಿಗಳ ಷಡ್ಯಂತ್ರ ನಡೆದಿದೆ, ಈಗ ಆರೆಸ್ಸೆಸ್ ನವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೇಜೋವಧೆ ಮಾಡುತ್ತಿದ್ದಾರೆ. ಇಂತಹ ಘಟಣೆಗಳನ್ನು ಖಂಡಿಸುತ್ತೇವೆ. ದೇಶ, ರಾಜ್ಯದಲ್ಲಿ ದಲಿತರ ವಿರುದ್ಧ ಅನೇಕ ಷಡ್ಯಂತ್ರಗಳು ನಡೆಯುತ್ತಿವೆ. ಕಾನೂನು ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ.ಜಾವೀದ್ ಖಾನ್, ಶಿವಲಿಂಗ ಮಾಡ್ಯಾಳ, ದಶರಥ ಕಾಂಬಳೆ, ಮಂಜುನಾಥ್ ಭಂಡಾರಿ, ಕಪೀಲ್ ವಾಲಿ, ಎಂ.ಡಿ ಅಶ್ರಫ್ ಅಲಿ, ಸುನೀಲ್ ಸಿಂಧೆ, ಗುರು ಮಾಳಗೆ, ಅರವಿಂದ ಕಮಲಾಪುರ, ಮಲ್ಲೇಶಿ ಯಾದವ್, ಸಮೀರ್ ಅವಟಿ, ಅಮೃತ ಸೇರಿದಂತೆ ಹಲವರು ಇದ್ದರು.