×
Ad

ಕಲಬುರಗಿ | ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ತಂದೆಯಿಂದಲೇ ಮಗಳ ಮರ್ಯಾದೆಗೇಡು ಹತ್ಯೆ

Update: 2025-08-29 22:30 IST

ಕವಿತಾ ಶಂಕರ ಕೊಳ್ಳೂರ, ಶಂಕರ ಕೊಳ್ಳುರ

ಕಲಬುರಗಿ, ಆ.29: ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕಾಗಿ ತನ್ನ ಮಗಳನ್ನೇ ಕತ್ತು ಹಿಸುಕಿ, ಸುಟ್ಟು ಹಾಕಿ ಮರ್ಯಾದೆಗೇಡು ಹತ್ಯೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ಮೃತರನ್ನು ಕವಿತಾ ಶಂಕರ ಕೊಳ್ಳೂರ(18) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಮೃತ ಯುವತಿಯ ತಂದೆ ಶಂಕರ ಕೊಳ್ಳುರ ಸೇರಿದಂತೆ ಮತ್ತಿಬ್ಬರು ಸಂಬಂಧಿಕರನ್ನು ಬಂಧಿಸಲು ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಕವಿತಾ, ಮೇಳಕುಂದಾ (ಬಿ) ಗ್ರಾಮದಲ್ಲೇ ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದರು ಎನ್ನಲಾಗಿದೆ. ತಂದೆ ಹಾಗೂ ಕುಟುಂಬಸ್ಥರು ತಿಳಿ ಹೇಳಿದ್ದರೂ ಪ್ರೀತಿ ಮುಂದುವರಿದಿತ್ತು. ಕುಟುಂಬಸ್ಥರ ಮಾತನ್ನು ಧಿಕ್ಕರಿಸಿದ್ದಾಳೆ ಎನ್ನುವ ಕಾರಣಕ್ಕೆ ಕವಿತಾಳನ್ನು ಕೊಲೆ ಮಾಡಿ, ಸುಟ್ಟು ಹಾಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೇಳಕುಂದಾ (ಬಿ) ಗ್ರಾಮದಲ್ಲಿ ಪ್ರೀತಿಸುತ್ತಿದ್ದ ಯುವತಿ ಮತ್ತು ಯುವಕನ ಜಾತಿಗಳು ಬೇರೆ ಬೇರೆಯಾಗಿವೆ. ಆ ಎರಡು ಜಾತಿಗಳ ಮಧ್ಯೆ ಹಲವು ವರ್ಷಗಳಿಂದ ಪರಸ್ಪರ ದ್ವೇಷ ಇತ್ತು ಎನ್ನಲಾಗಿದೆ. ಅದೇ ಕಾರಣಕ್ಕಾಗಿ ಮಗಳು ಕವಿತಾ, ಯುವಕನ ಜೊತೆ ಸಂಬಂಧ ಇದ್ದರೆ ಮರ್ಯಾದೆ ಹೋಗುತ್ತದೆ ಎಂದು ತಂದೆ, ಸಂಬಂಧಿಗಳು ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಡಾ.ಶರಣಪ್ಪ ಎಸ್.ಡಿ. ಸೇರಿದಂತೆ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News