ಕಲಬುರಗಿ | ರಿಂಗ್ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಭವನಕ್ಕೆ ಡಿಸಿ ಬಿ.ಫೌಝಿಯಾ ತರನ್ನುಮ್ ಭೇಟಿ
ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಶನಿವಾರ ರಿಂಗ್ ರಸ್ತೆಯಲ್ಲಿರುವ ಸಾಂಸ್ಕೃತಿಕ ಸಮುಚ್ಚಯ ಆವರಣದಲ್ಲಿ 5.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸ್ವಾತಂತ್ರ್ಯ ಹೋರಾಟಗಾರರ ಭವನದ ನವೀಕರಣದ ಕಾಮಗಾರಿಯನ್ನು ವೀಕ್ಷಿಸಿದರು.
800 ಆಸನದ ವ್ಯವಸ್ಥೆಯ ಆಡಿಟೋರಿಯಂ ಭವನದ ಕಾಮಗಾರಿ ಅಂತಿಮ ಹಂತಕ್ಕೆ ಬಂದಿರುವುದರಿಂದ ಸುಣ್ಣ-ಬಣ್ಣ ಮಾಡಿ ಮುಂಬರುವ ಆ.15ರ ಸ್ವಾತಂತ್ರ್ಯ ದಿನದಂದೇ ದೇಶಕ್ಕಾಗಿ ಹೋರಾಡಿದ ವೀರ ಪುತ್ರರಿಗೆ ಇದನ್ನು ಅರ್ಪಿಸಿ ಉದ್ಘಾಟಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕೆಂದು ಲೋಕೋಪಯೋಗಿ ಇಇ ಸುಭಾಷ್ ಬಿರಾದಾರ ಅವರಿಗೆ ಸೂಚಿಸಿದರು.
ನಗರದ ಎಂ.ಎಸ್.ಮಿಲ್ ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನ ತಲಾ 100 ವಿದ್ಯಾರ್ಥಿಗಳ ಸಾಮರ್ಥ್ಯದ 11 ಕೋಟಿ ರೂ. ವೆಚ್ಚದ ಜಿ+3 ಮಾದರಿಯ ಬಾಲಕರ ಮತ್ತು ಬಾಲಕೀಯರ ವಸತಿ ನಿಲಯ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಕೆಲಸದಲ್ಲಿ ಗುಣಮಟ್ಟ ಕಾಪಾಡಬೇಕೆಂದರಲ್ಲದೆ ಕೂಡಲೇ ಇದನ್ನು ವಿದ್ಯಾರ್ಥಿಗಳಿಗೆ ಸಮರ್ಪಣೆಗೆ ಅಣಿಯಾಗುವಂತೆ ನಿರ್ದೇಶನ ನೀಡಿದರು.
ಇದಕ್ಕೂ ಮುನ್ನ ಕೆ,.ಆರ್.ಐ.ಡಿ.ಎಲ್. ನಿಂದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಕ್ರೀಡಾ ವಸತಿ ನಿಲಯ ಕಾಮಗಾರಿ, ಮಹಿಳಾ ಒಳಾಂಗಣದ ಕ್ರೀಡಾಂಗಣ ಮತ್ತು ಚಂಪಾ ಕ್ರೀಡಾಂಗಣದ ಎದುರುಗಡೆ ನಿರ್ಮಿಸಲಾಗುತ್ತಿರುವ ಮಹಿಳಾ ಮಕ್ಕು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದ ಅಂಧ ಮಕ್ಕಳ ಶಾಲೆ ಕಾಮಗಾರಿ ವೀಕ್ಷಿಸಿದರು. ಕೆ.ಆರ್.ಐ.ಡಿ.ಎಲ್. ಇ.ಇ. ಸೌರಭ ಜೊತೆಗಿದ್ದರು.