ಕಲಬುರಗಿ | ಬಳವಡಗಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ ಬಿ.ಫೌಝಿಯಾ ತರನ್ನುಮ್
ಕಲಬುರಗಿ : ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮದಲ್ಲಿ ಮಳೆಯಿಂದ ಊರಿನ ಹಳ್ಳ ತುಂಬಿ ಮನೆಗೆಲ್ಲ ನೀರು ಬಂದ ಕಾರಣ ಅಲ್ಲಿನ ನಿವಾಸಿಗಳನ್ನು ರಕ್ಷಿಸಿ ಹಸ್ತಾಂತರ ಮಾಡಿದ ಕಾಳಜಿ ಕೇಂದ್ರಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭದಲ್ಲಿ ಸಂತ್ರಸ್ತರ ಅಹವಾಲು ಅಲಿಸಿ ಮಾತನಾಡಿದ ಡಿ.ಸಿ ಅವರು, ಸಂತ್ರಸ್ತರಿಗೆ ಊಟೋಪಚಾರ, ರಾತ್ರಿ ಮಲಗಲು ಹೊದಿಕೆ ಸೇರಿದಂತೆ ಸಕಲ ಮೂಲಸೌಕರ್ಯ ಒದಗಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಅರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಇದಕ್ಕೂ ಮುನ್ನ ಚಿತ್ತಾಪುರ ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕರ್ನಾಟಕ ಕೊಳಚೆ ಪ್ರದೇಶ ನಿರ್ಮೂಲನೆ ಮಂಡಳಿಯಿಂದ ಪಟ್ಟಣದಲ್ಲಿ ಬಡವರಿಗೆ ಹಂಚಿಕೆ ಮಾಡಲು ನಿರ್ಮಿಸಿರುವ ಜಿ+1 ಮಾದರಿಯ 1,000 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆಗೆ ರಾಯಂಡಮೇಜೇಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ತದನಂತರ ಪಟ್ಟಣದಲ್ಲಿ ನಿರ್ಮಾಣದ ಹಂತದಲ್ಲಿರುವ ಕೆಪಿಎಸ್ ಶಾಲೆ ಮತ್ತು ಉಪ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ನಾಗಾವಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದಾದ ಬೆಳೆ ಹಾನಿ ಪರಿಶೀಲಿಸಿದರು. ತಹಶೀಲ್ದಾರ್ ನಾಗಯ್ಯ ಮಠಪತಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.