ಕಲಬುರಗಿ| ಡಿ.9ರಂದು 'ಮಹಾಯಾನ' ಕಾದಂಬರಿ ಬಿಡುಗಡೆ, 10ಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ : ಪ್ರೊ.ಶಶಿಕಾಂತ್ ಉಡಿಕೇರಿ
ಕಲಬುರಗಿ: ಡಿ.9ರಂದು ಡಾ.ಅಂಬೇಡ್ಕರ್ ಅವರ ಕುರಿತಾದ ಹಿರಿಯ ಸಾಹಿತಿ ಪ್ರೊ.ಎಚ್.ಟಿ ಪೋತೆ ರಚಿತದ 'ಮಹಾಯಾನ' ಕಾದಂಬರಿ ಲೋಕಾರ್ಪಣೆ ಹಾಗೂ ಡಿ.10 ರಂದು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕೊಡಮಾಡುವ 'ಕರ್ನಾಟಕ ರಾಜ್ಯೋತ್ಸವ' ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ವಿವಿಯ ಕುಲಪತಿ ಪ್ರೊ.ಶಶಿಕಾಂತ್ ಉಡಿಕೇರಿ ತಿಳಿಸಿದ್ದಾರೆ.
ಗುಲಬರ್ಗಾ ವಿವಿಯ ಆವರಣದಲ್ಲಿರುವ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.10ರಂದು ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ದೀಪಾ ಬಸ್ತಿ ಅವರು ಪ್ರಶಸ್ತಿ ಪ್ರದಾನ ಮಾಡುವರು, ವಿಮರ್ಶಕ ಎಸ್.ಆರ್.ವಿಜಯಶಂಕರ್, ದಲಿತ ಮುಖಂಡ ಡಾ.ಡಿ.ಜಿ.ಸಾಗರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ವೇಳೆಯಲ್ಲಿ ಸಿಂಡಿಕೇಟ್ ಸದಸ್ಯೆ ಶ್ರೀದೇವಿ ಕಟ್ಟಿಮನಿ, ಸಿ.ಸುಲೋಚನಾ, ಮೌಲ್ಯಮಾಪನ ಕುಲಸಚಿವ ಡಾ.ಎನ್.ಜಿ. ಕಣ್ಣೂರ, ಜಯಂಬಿಕ ಉಪಸ್ಥಿತರಿರುವರು ಎಂದರು.
ಕನ್ನಡ ಪುಸ್ತಕ ಸೃಜನ, ಸೃಜನೇತರ, ವಚನ, ಜಾನಪದ, ಸಮಾಜ ವಿಜ್ಞಾನ, ಇಂಗ್ಲೀಷ್, ಉರ್ದು, ಪ್ರಕಾಶಕರು, ಜನಪದ ಕಲಾವಿದ, ಚಿತ್ರ, ಶಿಲ್ಪಕಲಾವಿದ, ಡಾ.ಅಂಬೇಡ್ಕರ್ ಪ್ರಶಸ್ತಿ, ವಿಜ್ಞಾನ ಪುಸ್ತಕ ಹಾಗೂ ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಪಡೆದವರನ್ನು ಗೌರವಿಸಲಾಗುವುದು ಎಂದು ವಿವರಿಸಿದರು.
ಡಿ.9 ರಂದು 'ಮಹಾಯಾನ' ಕಾದಂಬರಿ ಲೋಕಾರ್ಪಣೆ :
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 120 ಕ್ಕಿಂತ ಹೆಚ್ಚು ಪುಸ್ತಕಗಳನ್ನು ಅಧ್ಯಯನವನ್ನು ಮಾಡಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಕಥನ ಕುರಿತಾದ 700 ಪುಟಗಳ ಬೃಹತ್ ಕಾದಂಬರಿಯ ಲೋಕಾರ್ಪಣೆಯನ್ನು ಡಿ.9ರಂದು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ದೀಪಾ ಅವರು ಲೋಕಾರ್ಪಣೆ ಮಾಡುವರು ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ವಿವಿಯ ಕುಲಪತಿ ಪ್ರೊ.ಶಶಿಕಾಂತ್ ಉಡಿಕೇರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ಖ್ಯಾತ ವಿಮರ್ಶಕ ಎಸ್.ಆರ್.ವಿಜಯಶಂಕರ್ ಅವರು ಕೃತಿ ಕುರಿತು ಮಾತನಾಡುವರು, ಕೇಂದ್ರೀಯ ವಿವಿಯ ಪ್ರಾಧ್ಯಾಪಕ ವಿಕ್ರಮ ವಿಸಾಜಿ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಕಲಬುರಗಿಯಲ್ಲಿ ಪ್ರತಿಷ್ಠಾನ ಸ್ಥಾಪಿಸಿ :
ಗುಲಬರ್ಗಾ ವಿವಿ ಮಾತ್ರ ಈ ಭಾಗದ ಸಾಹಿತಿ, ಕಲಾವಿದರನ್ನು ಪ್ರೋತ್ಸಾಹಿಸಲು ಹಲವು ವರ್ಷಗಳಿಂದ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ, ಆದರೆ ನಮ್ಮ ಕಡೆ ಖಾಸಗಿಯಾಗಲಿ ಸರ್ಕಾರದ್ದಾಗಲಿ ಯಾವುದೇ ಪ್ರತಿಷ್ಠಾನಗಳು ಇಲ್ಲ, ಹಾಗಾಗಿ ಸರ್ಕಾರವೇ ಖುದ್ದಾಗಿ ಚೆನ್ನಣ್ಣ ವಾಲೀಕಾರ, ಗೀತಾ ನಾಗಭೂಷಣ್, ಬಿ.ಶ್ಯಾಮಸುಂದರ್ ಅಥವಾ ಮತ್ತಿತ್ತರ ಬೇರೆ ಸಾಹಿತಿಗಳ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಪ್ರಶಸ್ತಿ ಕೊಡುವಂತಾಗಲಿ.
_ ಪ್ರೊ.ಎಚ್.ಟಿ.ಪೋತೆ (ಡೀನರು, ಕಲಾನಿಕಾಯ ಹಾಗೂ ನಿರ್ದೇಶಕರು, ಕನ್ನಡ ಅಧ್ಯಯನ ಸಂಸ್ಥೆ ಗು.ವಿ.ಕ)