×
Ad

ಕಲಬುರಗಿ | ನ.1ರಂದು ಸಂಭ್ರಮದ ರಾಜ್ಯೋತ್ಸವ ಆಚರಣೆಗೆ ನಿರ್ಧಾರ : ಡಿಸಿ ಬಿ.ಫೌಝಿಯಾ ತರನ್ನುಮ್

Update: 2025-10-23 22:14 IST

ಕಲಬುರಗಿ : ನ.1 ರಂದು ಜಿಲ್ಲೆಯಾದ್ಯಂತ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ‌ಯನ್ನು ಸಡಗರ ಸಂಭ್ರಮದಿಂದ ಆಚರಿಸಲು ಡಿಸಿ ಬಿ.ಫೌಝಿಯಾ ತರನ್ನುಮ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು, ಅಂದು ನಗರೇಶ್ವರ ಶಾಲೆ ಅವರಣದಲ್ಲಿ ಬೆಳಿಗ್ಗೆ 9 ಗಂಟೆಗೆ ತಾಯಿ ಭುವನೇಶ್ವರಿ ಪೂಜೆ ಸಲ್ಲಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರಧ್ಚಜಾರೋಹಣ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು ಎಂದರು.

ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕು. ಕಾರ್ಯಕ್ರಮ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು. ಸಾರ್ವಜನಿಕರಿಗೆ,‌ನಮಕ್ಕಳಿಗೆ ಆಸನದ ವ್ಯವಸ್ಥೆ ಜೊತೆಗೆ ನೆರಳಿನ ವ್ಯವಸ್ಥೆ ಮಾಡಬೇಕು. ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ವೇದಿಕೆ ಬಳಿ ಹಾಗೂ ಮೆರವಣಿಗೆ ಯುದ್ದಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶಾಲಾ ಮಕ್ಕಳು, ಗಣ್ಯರು ಆಗಮಿಸುವುದರಿಂದ ಸೂಕ್ತ‌ ಪೊಲೀಸ್ ಭದ್ರತೆ ಒದಗಿಸಬೇಕೆಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ನಗರೇಶ್ವರ ಶಾಲೆಯಿಂದ ಡಿಸಿ ಕಚೇರಿ ವರೆಗೆ ಸಾಗುವ ಸ್ಥಬ್ದಚಿತ್ರಗಳ ಮೆರವಣಿಗೆ‌ಗೆ ನಾಡು ನುಡಿ ಕುರಿತು ಬೆಳಕು ಚೆಲ್ಲುವ ವಿಷಯವನ್ನಾಧರಿಸಿ ವಿವಿಧ ಇಲಾಖೆಯಿಂದ ಟ್ಯಾಬ್ಲೋ ಸಿದ್ಧಪಡಿಸಬೇಕು. ಮೆರವಣಿಗೆಯುದ್ದಕ್ಕೂ ಪ್ರತಿ ಟ್ಯಾಬ್ಲೋ ಮುಂದೆ ಕಲಾ ತಂಡಗಳನ್ನು ನಿಯೋಜಿಸಬೇಕು‌ ಎಂದರು.

ವೇದಿಕೆ ಕಾರ್ಯಕ್ರಮದಲ್ಲಿ ಯಾವುದೇ ಸರ್ಕಾರಿ ಸೌಲಭ್ಯ ವಿತರಣೆ ಮಾಡುವುದಿದ್ದರೆ, ಅಧಿಕಾರಿಗಳು ಇಂದೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಕೊನೆ‌ ಕ್ಷಣದಲ್ಲಿ ಕಾರ್ಯಕ್ರಮ ಪಟ್ಟಿಗೆ ಸೇರಿಸುವುದು ಕಷ್ಟವಾಗುತ್ತದೆ. ಇನ್ನು ರಾಜ್ಯೋತ್ಸವ ದಿನಾಚರಣೆ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಿದ್ದು, ಅಧಿಕಾರಿಗಳು ತಮಗೆ ವಹಿಸಿದ ಕೆಲಸ‌ ಕಾರ್ಯಗಳನ್ಮು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.

ಸಭೆಯಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ,‌ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್.ಪಿ ಮಹೇಶ ಮೇಘಣ್ಣನವರ್ ಸೇರಿದಂತೆ‌ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News