ಕಲಬುರಗಿ | ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಕಲಬುರಗಿ : ಜಿಲ್ಲೆಯಲ್ಲಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಂದೀಪ ಭರಣಿ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
2025ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಕೊನೆಯ ಸ್ಥಾನ ಪಡೆದಿದ್ದು, ಇದಕ್ಕೆ ಶಿಕ್ಷಣ ಇಲಾಖೆಯೇ ನೇರ ಕಾರಣವಾಗಿದ್ದು, ಜಿಲ್ಲೆಯಲ್ಲಿ ಅಕ್ರಮವಾಗಿ ಕಿರಾಣಿ ಅಂಗಡಿಗಳಂತೆ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮನವಿಯಲ್ಲಿ ಆರೋಪಿಸಿದರು.
ಕಲಬುರಗಿ ನಗರದದಲ್ಲಿ ಒಂದು ಪರವಾನಿಗೆಯನ್ನು ಪಡೆದು ಇದರ ಅಡಿ 3-4 ಶಾಲೆಗಳನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ, ಶಾಲೆಯನ್ನು ನಡೆಸಲು ಅನುಮತಿ ಪಡೆಯಲು ಶಾಲೆಯಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಆಟವಾಡಲು ಗ್ರೌಂಡ್ ಹೊಂದಿರಬೇಕು. ಆದರೆ ಕಲಬುರಗಿಯಲ್ಲಿ ಹಲವಾರು ಶಾಲೆಗಳಲ್ಲಿ ಯಾವುದೇ ಆಟದ ಮೈದಾನಗಳು ಇರುವುದಿಲ್ಲ ಎಂದು ತಿಳಿಸಿದರು.
ಅಕ್ರಮವಾಗಿ ಶಾಲೆಗಳನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಸಹ ಇದಕ್ಕೆ ಹೊಣೆಗಾರರಾಗಿರುತ್ತವೆ, ಕಲಬುರಗಿ ನಗರದ ಶಾಲೆಗಳ ರಿನಿವಲ್ ಮುಗಿದರೂ ಸಹ ಹಿಂದಿನ ದಿನಾಂಕಗಳನ್ನು ನಮೂದಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಕ್ರಮ ಮತ್ತು ಕಾನೂನುಬಾಹಿರವಾಗಿ ರಿನಿವಲ್ ಮಾಡಿಕೊಡುತ್ತಿದ್ದಾರೆ. ಕನ್ನಡ ಮಾಧ್ಯಮ ಅನುಮತಿ ಪಡೆದು ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಒಂದೇ ಶಾಲೆಗಳ ಹೆಸರಿನಲ್ಲಿ ವಿದ್ಯಾರ್ಥಿಗಳ ದಾಖಲಾತಿಗಳನ್ನು ಪಡೆದುಕೊಂಡು ಬೇರೆಡೆ ಶಾಲೆಗಳನ್ನು ನಡೆಸುತ್ತಿದ್ದು, ಪರೀಕ್ಷೆಯ ಸಂದರ್ಭದಲ್ಲಿ ಮೂಲ ಶಾಲೆಯ ಹೆಸರಿನಲ್ಲಿ ಪರೀಕ್ಷೆ ಪ್ರವೇಶ ಪತ್ರ, ಅಂಕಪಟ್ಟಿ ಹಾಗೂ ವರ್ಗಾವಣೆ ಪ್ರಮಾಣ ಪತ್ರಗಳನ್ನು ಕಾನೂನುಬಾಹಿರವಾಗಿ ವಿತರಣೆ ಮಾಡಲಾಗುತ್ತಿದೆ. ಇಂತಹ ಚಟುವಟಿಕೆಗಳನ್ನು ನಡೆಸುತ್ತಿರುವ ಮೂಲಶಾಲೆಗಳು ಹಾಗೂ ನಡೆಸುತ್ತಿರುವವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪರವಾನಿಗೆ ರದ್ದುಗೊಳಿಸಬೇಕು. ಅಕ್ರಮ ಎಸಗುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸತೀಶ ಕಡೂನ್ ಇದ್ದರು.