ಕಲಬುರಗಿ | ಸಾಮಾಜಿಕ, ಶೈಕ್ಷಣಿಕ ಗಣತಿ ಕಾರ್ಯಕ್ಕೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಚಾಲನೆ
ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಪ್ರಾರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ರ ಮನೆ ಮನೆ ಸಮೀಕ್ಷೆಯನ್ನು ಸೋಮವಾರದಂದು ಬೆಳಗ್ಗೆ ಇಲ್ಲಿನ ವಾರ್ಡ್ ನಂ.33 ಸುಂದರ ನಗರದಲ್ಲಿ ಜಿಲ್ಲಾಧಿಕಾರಿಗಳಾದ ಬಿ.ಫೌಝಿಯಾ ತರನ್ನುಮ್ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಅ.7 ರವರೆಗೆ ನಡೆಯಲಿರುವ ಮನೆ ಮನೆ ಸಮೀಕ್ಷೆಯನ್ನು ಇ- ಆಡಳಿತ ಇಲಾಖೆಯ ಇಡಿಸಿಎಸ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಮೊಬೈಲ್ ಆಪ್ ಮುಖಾಂತರ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಜೆಸ್ಕಾಂ ಮುಖಾಂತರ ಒಟ್ಟು 5,85,956 ಕುಟುಂಬಗಳಿಗೆ UHID ನಂಬರಗಳನ್ನು ನೀಡುವ ಮೂಲಕ ಗುರುತಿಸಲಾಗಿದ್ದು, 5,297 ಗಣತಿ ಬ್ಲಾಕ್‍ಗಳನ್ನು ಸೃಜಿಸಲಾಗಿರುತ್ತದೆ. ಪ್ರತಿ ಬ್ಲಾಕ್‍ಗಳಲ್ಲಿ 100 ರಿಂದ 150 ಕುಟುಂಬಗಳಿದ್ದು, ಪ್ರತಿ ಬ್ಲಾಕ್‍ಗೆ ಒಬ್ಬೂಬ್ಬ ಗಣತಿದಾರನ್ನು ನಿಯೋಜಿಸಿ 2 ಹಂತಗಳಲ್ಲಿ ತರಬೇತಿ ನೀಡಲಾಗಿರುತ್ತದೆ ಎಂದರು.
ಸಮೀಕ್ಷಾ ಆಪ್‍ನಲ್ಲಿ ಕುಟುಂಬದ ಎಲ್ಲಾ ಸದಸ್ಯರ ವಿವರದೊಂದಿಗೆ ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಹಾಗೂ ಔದ್ಯೋಗಿಕ ಮಾಹಿತಿಗಳನ್ನೊಳಗೊಂಡ 40 ಪ್ರಶ್ನೆಗಳು ಹಾಗೂ ಒಟ್ಟಾರೆ ಕುಟುಂಬಕ್ಕೆ ಸಂಬಂಧಿಸಿದ 20 ಪ್ರಶ್ನೆಗಳಿರುತ್ತವೆ. ಸಮೀಕ್ಷೆದಾರರು ಮನೆಗೆ ಭೇಟಿ ನೀಡಿದಾಗ ಪಡಿತರ ಚೀಟಿ, ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನು ಸಿದ್ದಮಾಡಿ ಇಟ್ಟುಕೊಂಡಿರಬೇಕು ಹಾಗೂ ಕುಟುಂಬದ ಸದಸ್ಯರ ಆಧಾರ ಕಾರ್ಡ್‌ಗಳು ಯಾವ ಮೊಬೈಲ್ ನಂಬರಿಕೆ ಲಿಂಕ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಂಡಿರಬೇಕು. ಮುಂದಿನ 15 ದಿನಗಳ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿದೆ ಎಂದರು.
ಹೆಚ್ಚಿನ ಮಾಹಿತಿ ಅಗತ್ಯವಿದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ಅಥವಾ ವೆಬ್ ಸೈಟ್ ವಿಳಾಸ https://kscbc.karnataka.gov.in ನೋಡಬಹುದು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆಯ ಆಯುಕ್ತರಾದ ಅವಿನಾಶ ಸಿಂಧೆ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, 33 ನೇ ವಾರ್ಡ್ ಕಾರ್ಪೊರೇಟರ್ ರಾಗಮ್ಮ ಇನಾಂದಾರ್, ಸಾಮಾಜಿಕ ಮತ್ತು ಶೈಕ್ಷಣಿಕ ಜಿಲ್ಲಾ ಸಮನ್ವಯ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರ್ ವೈ., ಸಮೀಕ್ಷಾ ಗಣತಿಯ ಕಲಬುರಗಿ ತಾಲೂಕಿನ ನೋಡಲ್ ಅಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಯೋಜನೆಯ ವ್ಯವಸ್ಥಾಪಕ ಅರವಿಂದ್ ರೆಡ್ಡಿ, ಮುರಾರ್ಜಿ ಶಾಲೆಯ ಶಿಕ್ಷಕಿ ಜಗದೇವಿ ಸೇರಿದಂತೆ ಮತ್ತಿತರ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.