×
Ad

ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಪರಿವರ್ತನೆಗಾಗಿ ದಾಸರು ಧ್ವನಿಯಾಗಿ ನಿಂತವರು: ಡಾ. ಉಡಿಕೇರಿ

Update: 2025-10-18 20:59 IST

ಕಲಬುರಗಿ: ಶೋಷಿತರು, ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಪರಿವರ್ತನೆಗಾಗಿ ದಾಸರು ಧ್ವನಿಯಾಗಿ ನಿಂತವರು ದಾಸರಾಗಿದ್ದರು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ. ಶಶಿಕಾಂತ ಉಡಿಕೇರಿ ಹೇಳಿದರು.

ನಗರದ ಕನ್ನಡಭವನದಲ್ಲಿ ಕಲಬುರಗಿ ಜಿಲ್ಲಾ ದಾಸ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಮತ್ತು ಶುದ್ಧೀಕರಣಕ್ಕೆ ದಾಸರು ಆಧ್ಯಾತ್ಮಿಕ ನೆಲೆಯಲ್ಲಿ ದಾಸ ಸಾಹಿತ್ಯ ರಚನೆ ಮಾಡಿದ್ದಾರೆ. ಆ ಸಾಹಿತ್ಯ ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ. ಇಂಥ ನೆಲದ ಪರಂಪರೆಯಲ್ಲಿ ಕೃಷಿ ಪ್ರಾಧ್ಯಾಪಕನಾಗಿ ವಿಶ್ವವಿದ್ಯಾಲಯದ ಕುಲಪತಿಗಳಾಗಲು ನನ್ನ ಭಾಗ್ಯ. ಬರುವ ದಿನಗಳಲ್ಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕವಾಗಿ ಸುಧಾರಣೆ ತರಲು ಉತ್ಸುಕತೆ ಹೊಂದಿದ್ದೇನೆ ಎಂದರು.

ಸಮ್ಮೇಳನಾಧ್ಯಕ್ಷ ಸಾಹಿತಿ-ಪತ್ರಕರ್ತ ಡಾ. ಶ್ರೀನಿವಾಸ ಸಿರನೂರಕರ್ ಮಾತನಾಡಿ, ರಾಜ್ಯದಲ್ಲಿ ಸ್ಥಾಪಿಸಿರುವ ವಚನ ವಿಶ್ವವಿದ್ಯಾಲಯದಂತೆ ದಾಸ ಸಾಹಿತ್ಯದ ವಿಶ್ವವಿದ್ಯಾಲಯ ಕೂಡ ಸ್ಥಾಪನೆ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ ಅವರು, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ದಾಸ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಹಾಗೂ ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಮಹಿಳಾ ದಾಸ ಸಾಹಿತಿಗಳ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ದಾಸ ಸಾಹಿತ್ಯ ಬಂಡಾಯದ ಪ್ರಜ್ಞೆ ಹೊಂದಿದೆ. ಅಂದಿನ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ ಪ್ರತಿಭಟಿಸಿದ ದಾಸರಾಗಿದ್ದಾರೆ. 15 ಮತ್ತು 16ನೇ ಶತಮಾನದಲ್ಲಿಯೇ ದಲಿತ ಬಂಡಾಯ ಪ್ರಜ್ಞೆ ಮೂಡಿಸಿದವರಲ್ಲಿ ಪುರಂದರ ದಾಸರ ಸಾಹಿತ್ಯ ಪ್ರಥಮವಾಗಿದೆ. ಸಮಾಜದ ವರ್ಗಗಳನ್ನು ಖಂಡಿಸಿದವರು. ಇವರ ನಂತರ ಬಂಡಾಯ ಸಾಹಿತ್ಯ ಬೆಳೆಯಿತು. ಮತೀಯ ಬೆಳವಣಿಗೆ ವಿರೋಧಿಸಿ ಸಮಸ್ಯೆಯಂತೆ ಸಾರವಾಗಿ ಬೆಳೆಸಲಾಯಿತು ಎಂದರು.

ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿದರು.

ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕತ್ತಲೆ ತುಂಬಿದ ಬದುಕಿಗೆ ಅರಿವಿನ ಜ್ಯೋತಿ ಬೆಳಗಿಸಿ ಸಾಮಾಜಿಕ ಸಾಮರಸ್ಯಕ್ಕೆ ನಾಂದಿ ಹಾಡಿದ ವಚನಕಾರರು ಹಾಗೂ ದಾಸ ಪರಂಪರೆ ಇಂದಿಗೂ ತನ್ನ ಶ್ರೇಷ್ಟತೆ ಉಳಿಸಿಕೊಂಡಿದೆ. ಕನ್ನಡ ಸಾಹಿತ್ಯಕ್ಕೆ ವಚನ ಹಾಗೂ ದಾಸ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ನಮ್ಮ ದೈನಂದಿನ ಬದುಕಿನಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ವಚನ ಮತ್ತು ದಾಸ ಸಾಹಿತ್ಯದಲ್ಲಿ ಪರಿಹಾರ ಇದೆ ಎಂದರು.

ಪಾಲಿಕೆಯ ವಿಪಕ್ಷ ನಾಯಕಿ ಶೋಭಾ ದೇಸಾಯಿ, ಸ್ವಾಗತ ಸಮಿತಿಯ ಮಲ್ಲಣ್ಣ ನಾಗರಾಳ, ಕೃಷ್ಣಾಜೀ ಕುಲಕರ್ಣಿ, ಕಸಾಪ ವಲಯ ಅಧ್ಯಕ್ಷ ರವಿಕುಮಾರ ಶಹಾಪೂರಕರ್, ಸಿದ್ಧಲಿಂಗ ಬಾಳಿ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ , ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ , ಕಲ್ಯಾಣಕುಮಾರ ಶೀಲವಂತ, ಜಗದೀಶ ಮರಪಳ್ಳಿ ಮಾತನಾಡಿದರು.

ನಂತರ ನಡೆದ ದಾಸ ಚಿಂತನೆ ಗೋಷ್ಠಿಯಲ್ಲಿ ಡಾ. ಸದಾನಂದ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ದಾಸ ಸಾಹಿತ್ಯಕ್ಕೆ ಬ್ರಾಹ್ಮಣೇತರರ ಕೊಡುಗೆ ಕುರಿತು ಡಾ. ಜಗನ್ನಾಥ ತರನಳ್ಳಿ, ದಾಸ ಸಾಹಿತ್ಯ -ಸಾಮಾಜಿಕ ಕಾಳಜಿ ಕುರಿತು ಡಾ. ಶೈಲಜಾ ಕೊಪ್ಪರ, ಸಮ್ಮೇಳನಾಧ್ಯಕ್ಷರ ಬದುಕು ಬರಹ ದ ಕುರಿತು ಶೇಷಮೂರ್ತಿ ಅವಧಾನಿ ಮಾತನಾಡಿದರು. ಪ್ರೊ. ಎಸ್.ಎಲ್. ಪಾಟೀಲ, ಸುರೇಶ ಗೌರೆ, ಚಂದ್ರಕಾಂತ ಏರಿ, ಜಗನ್ನಾಥ ಸೂರ್ಯವಂಶಿ, ಮಂಜುನಾಥ ಕಂಬಾಳಿಮಠ, ಗಂಗಾಧರ ಭಂಗರಗಿ, ಜಯಶ್ರೀ ಯಾದಗಿರಿ, ಮಲ್ಲಿನಾಥ ಸಂಗಶೆಟ್ಟಿ, ಸಂಗಪ್ಪ ಭೀಮಳ್ಳಿ, ಶಿವಕುಮಾರ ಸಿ.ಎಚ್., ಪ್ರಲ್ಹಾದ ಪೂಜಾರಿ, ದಾನೇಶ ಮಾಲಗತ್ತಿ ವೇದಿಕೆ ಮೇಲಿದ್ದರು.

ಸಮಾರೋಪ ನುಡಿಗಳನ್ನಾಡಿದ ಗುಲಬರ್ಗಾ ವಿ.ವಿ. ನಿವೃತ್ತ ಕುಲಪತಿ ಡಾ. ಪರಿಮಳ ಅಂಬೇಕರ್, ಇದ್ದ ವ್ಯವಸ್ಥೆಯನ್ನು ಮುರಿದು ಕಟ್ಟುವುದೇ ದಾಸ ಸಾಹಿತ್ಯದ ಉದ್ದೇಶವಾಗಿದೆ. ಸಮನ್ವಯ ರೀತಿಯಲ್ಲಿ ಹೊಸ ಸಮಾಜ ನಿರ್ಮಾಣ ಅವರದ್ದಾಗಿತ್ತು. ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆ ದಿಕ್ಕರಿಸಿದವರು ದಾಸರಾಗಿದ್ದಾರೆ. ಆಧ್ಯಾತ್ಮಿಕ ನೆಲೆಯಲ್ಲಿ ಹೊಸ ಸಮಾಜ ಪುನರ್ ಸ್ಥಾಪಿಸಲು ಮುಂದಾಗಿದ್ದರು. ಆ ಮೂಲಕ ಸಮ ಸಮಾಜಕ್ಕಾಗಿ ತಮ್ಮ ಚಿಂತನೆಗಳನ್ನು ಹರಿದು ಬಿಟ್ಟರು. ದಾಸ ಸಾಹಿತ್ಯದಲ್ಲಿ ಮಾತೃ ಹೃದಯ ಮತ್ತು ಭಕ್ತಿ ಪರಂಪರೆ ಕಾಣುತ್ತೇವೆ ಎಂದು ಹೇಳಿದರು.

ಡಾ. ಸಂತೋಷ ಹೊಸಮನಿ, ಡಾ. ಸುರೇಶ ಮಾಳೇಗಾಂವ, ಡಾ. ಇಂದುಮತಿ ದೇಶಮಾನ್ಯೆ, ವಸುಮತಿ ದೀಪಕ, ಶಕುಂತಲಾ ಚವ್ಹಾಣ, ವಿಜಯಲಕ್ಷ್ಮೀ, ಸ್ವಪ್ನಾ, ವೈಶಾಲಿ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಜಯಶ್ರೀ ಜಮಾದಾರ ವೇದಿಕೆ ಮೇಲಿದ್ದರು.

ಡಾ. ಸುನಂದಾ ಸಾಲವಾಡಗಿ, ಓಂಕಾರ ನೃತ್ಯ ಸಾಧನಾ ಕಲಾ ತಂಡ, ಮಹಾಲಕ್ಷ್ಮೀ ಭಜನಾ ಮಂಡಳಿ, ಕಲ್ಪವೃಕ್ಷ ಶಿಕ್ಷಣ ಸಂಸ್ಥೆ, ರಂಗವಿಠಲ ಭಜನಾ ಮಂಡಳಿ ಅವರುಗಳಿಂದ ಜರುಗಿದ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿವಿಧ ಕ್ಷೇತ್ರದ ಅನೇಕ ಸಾಧಕರನ್ನು ಸತ್ಕರಿಸಲಾಯಿತು.

ದಾಸರ ವೇಷ ಭೂಷಣ ತೊಟ್ಟ ಮಕ್ಕಳು ಪ್ರೇಕ್ಷಕರ ಗಮನ ಸೆಳೆದರು. ಶಾಲಾ ಮಕ್ಕಳ ಕೋಲಾಟ ನೃತ್ಯ, ಡೊಳ್ಳು ಕುಣಿತ ಹಾಗೂ ವಿವಿಧ ಕಲಾ ತಂಡಗಳ ಗೆಜ್ಜೆ ನಾದ ವಿಶೇಷವಾಗಿದ್ದವು. ಮತ್ತು ಕನ್ನಡ ಗೀತೆಗಳ ನೃತ್ಯ ಜನಮನ ರಂಜಿಸಿದವು. ಮಿನಿ ವಿಧಾನ ಸೌಧದಿಂದ ಆರಂಭವಾದ ಮೆರವಣಿಗೆ ಮುಖ್ಯ ರಸ್ತೆ ಮೂಲಕ ಸಾಗಿ ಸರದಾರ ವಲ್ಲಭಬಾಯಿ ಪಟೇಲ್ ವೃತ್ತಕ್ಕೆ ಬಂದು ಕನ್ನಡ ಭವನದಂಗಳಕ್ಕೆ ತಲುಪಿತು.

ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಝೀರುದ್ದಿನ್ ಮುತ್ತವಲ್ಲಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಕೆ.ಎಸ್.ಆರ್.ಪಿ. ಸಹಾಯಕ ಕಮಾಂಡೆಂಟ್ ಗುರುನಾಥ ಎಸ್. ನೇತೃತ್ವ ವಹಿಸಿದ್ದರು. ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ, ನವಾಬ ಖಾನ್, ವಿನೋದಕುಮಾರ ಜೇನವೇರಿ, ಸಂತೋಷ ಕುಡಳ್ಳಿ, ಸುರೆಶ ಲೇಂಗಟಿ, ಸುರೇಶ ದೇಶಪಾಂಡೆ, ಶರಣಬಸಪ್ಪ ಕೋಬಾಳ, ಎಸ್.ಕೆ.ಬಿರಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News