Kalaburagi | ಎಸ್‌ಐಆರ್ ಪರಿಷ್ಕರಣೆ ಕರಡು ಮತದಾರರ ಪಟ್ಟಿ ಪ್ರಕಟ : ಗುಲ್ಬರ್ಗಾ ಗ್ರಾಮೀಣದಲ್ಲಿ 2.21 ಲಕ್ಷ ಮತದಾರರು: ಸಾಹಿತ್ಯಾ ಆಲದಕಟ್ಟಿ
ಕಲಬುರಗಿ: ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ–2026ರ (SIR) ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಗುಲ್ಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,21,513 ಮತದಾರರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಕಲಬುರಗಿ ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತೆ ಸಾಹಿತ್ಯಾ ಆಲದಕಟ್ಟಿ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ 2,74,878 ಮತದಾರರಿದ್ದರು. ಪರಿಷ್ಕರಣೆ ಬಳಿಕ ಪ್ರಕಟವಾದ ಕರಡು ಪಟ್ಟಿಯಲ್ಲಿ 1,14,753 ಪುರುಷರು, 1,06,739 ಮಹಿಳೆಯರು ಹಾಗೂ 21 ಇತರೆ ಮತದಾರರು ಸೇರಿದಂತೆ ಒಟ್ಟು 2,21,513 ಮತದಾರರು ನೋಂದಾಯಿತರಾಗಿದ್ದಾರೆ. ಇವರಲ್ಲಿ 1,595 ಯುವ ಮತದಾರರು, 2,069 ಹಿರಿಯ ನಾಗರಿಕರು ಹಾಗೂ 2,930 ವಿಶೇಷಚೇತನ ಮತದಾರರು ಇದ್ದಾರೆ. ಪ್ರತಿ 1,000 ಪುರುಷ ಮತದಾರರಿಗೆ 930 ಮಹಿಳಾ ಮತದಾರರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ 53,365 ಮತದಾರರನ್ನು ಎಎಸ್‌ಡಿಡಿ ವರ್ಗದಲ್ಲಿ ಗುರುತಿಸಲಾಗಿದೆ. ಕರಡು ಮತದಾರರ ಪಟ್ಟಿಯನ್ನು ಕ್ಷೇತ್ರ ವ್ಯಾಪ್ತಿಯ ತಹಶೀಲ್ದಾರ್ ಕಚೇರಿಗಳು, ಸ್ಥಳೀಯ ಸಂಸ್ಥೆಗಳ ಕಚೇರಿಗಳು ಹಾಗೂ ಮತಗಟ್ಟೆ ಅಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರ ಪರಿಶೀಲನೆಗಾಗಿ ಪ್ರಕಟಿಸಲಾಗಿದೆ. ಅಲ್ಲದೆ, ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿಯೂ ಪಟ್ಟಿ ಲಭ್ಯವಿದೆ.
ನೋ-ಮ್ಯಾಪಿಂಗ್ ಹಾಗೂ ಅಸಂಗತತೆ ಹೊಂದಿರುವ 10,894 ಮತದಾರರಿಗೆ ಬಿಎಲ್‌ಒಗಳ ಮೂಲಕ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿಯೇ ವಿಚಾರಣೆ ನಡೆಸಲು ಹೆಚ್ಚುವರಿ ಎಇಆರ್‌ಒಗಳನ್ನು ನಿಯೋಜಿಸಲು ಶಿಫಾರಸು ಮಾಡಲಾಗಿದೆ ಎಂದು ಸಾಹಿತ್ಯಾ ಆಲದಕಟ್ಟಿ ತಿಳಿಸಿದರು.
ನೋಟಿಸ್ ಹಾಗೂ ಹಕ್ಕು–ಆಕ್ಷೇಪಣೆಗಳ ವಿಚಾರಣೆ ಪ್ರಕ್ರಿಯೆಯನ್ನು ಅಕ್ಟೋಬರ್ 22ರೊಳಗೆ ಪೂರ್ಣಗೊಳಿಸಲಾಗುವುದು. ಬಳಿಕ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ತಹಶೀಲ್ದಾರ್ ಕೆ. ಆನಂದಶೀಲ, ಕಮಲಾಪುರ ತಹಶೀಲ್ದಾರ್ ಮೊಹಮ್ಮದ್ ಮೋಸಿನ್ ಹಾಗೂ ಶಹಾಬಾದ್ ತಹಶೀಲ್ದಾರ್ ನೀಲಪ್ರಭಾ ಉಪಸ್ಥಿತರಿದ್ದರು.