×
Ad

ಕಲಬುರಗಿ | ಆರೋಗ್ಯಕರ ದೇಹಕ್ಕೆ ವ್ಯಾಯಾಮವೇ ಔಷಧಿ : ಡಾ.ವಿವೇಕಾನಂದ ರೆಡ್ಡಿ

Update: 2025-10-29 19:42 IST

ಕಲಬುರಗಿ: ನಾವು ದಿನ ನಿತ್ಯ ವ್ಯಾಯಾಮ ಮಾಡುವುದರಿಂದ ನಮ್ಮ ದೇಹದಲ್ಲಿ ಯಾವ ರೋಗವು ಸುಳಿಯುವುದಿಲ್ಲ ಎಂದು ಕಲಬುರಗಿ ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ವಿವೇಕಾನಂದ ರೆಡ್ಡಿ ಹೇಳಿದರು.

ಬುಧವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಜಿಲ್ಲಾ ಆಸ್ಪತ್ರೆ, ಜಿಮ್ಸ್ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಮ್ಸ್ ಮೆಡಿಕಲ್ ಕಾಲೇಜಿನ ಮೈಕ್ರೋ ಬಯೋಲೋಜಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪಾಶ್ರ್ವವಾಯು ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಆರೋಗ್ಯವಾಗಿ ಇರಬೇಕಾದರೆ ದಿನಾಲು ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಮಧ್ಯಪಾನ ಧೂಮಪಾನದಿಂದ ದೂರವಿರಬೇಕು. ಒಳ್ಳೆಯ ಆಹಾರ ಸೇವನೆ ಮಾಡಬೇಕು. ನಮ್ಮ ದೇಹದ ಅಂಗಾಂಗಳು ಚಲಿಸದೆ ಇದ್ದಾಗ ನಮ್ಮ ಮೆದುಳಿನ ಭಾಗಕ್ಕೆ ಸರಿಯಾಗಿ ರಕ್ತ ಸಂಚಾರ ಆಗದೆ ಇದ್ದಾಗ ಸ್ಟ್ರೋಕ್ ಹೊಡೆಯುತ್ತದೆ. ಈ ರೋಗ ಅತಿ ಹೆಚ್ಚು ಬಿಪಿ ಮತ್ತು ಸುಗರ್ ಇರುವ ಜನರಲ್ಲಿ ಕಾಣಿಸಿಕೊಳ್ಳಲಿದೆ ಎಂದರು.

ಪಾಶ್ರ್ವವಾಯು ಸಂಭವಿಸಿದ ಸುವರ್ಣ ಸಮಯದ ಒಳಗೆ ರೋಗಿಯನ್ನು ಹತ್ತಿರದ ಸ್ಟ್ರೋಕ್ ಚಿಕಿತ್ಸೆ ನೀಡುವ ಆಸ್ಪತ್ರೆಗೆ ದಾಖಲು ಮಾಡಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಪಾಶ್ರ್ವವಾಯುಗೆ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸೆ ಲಭ್ಯವಿರದ ಕಾರಣ ಸಾರ್ವಜನಿಕರಿಗೆ ತಮ್ಮ ವಾಸಸ್ಥಳದ ಹತ್ತಿರ ಇರುವ ಸ್ಟ್ರೋಕ್ ಆಸ್ಪತ್ರೆಯ ಬಗ್ಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ ಜಿಮ್ಸ್‍ನ ಮನೋರೋಗ ವಿಭಾಗದ ಮುಖ್ಯಸ್ಥರಾದ ಡಾ.ಪ್ರಭುಕಿರಣ ಗೋಗಿ ಅವರು ಅತಿಥಿ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ (ಕಭಿ), ಒಂದು ದಿನದ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ಡಾ.ಸಂತೋಷ ಅಲಗೊರೆ, ಹಾಗೂ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಸರಕಾರಿ ಜಿಲ್ಲಾ ಜಿಮ್ಸ್ ಆಸ್ಪತ್ರೆ ಕಭಿ ಸಿಬ್ಬಂದಿಗಳಾದ ಗಿರೀಶ, ಕಾಶಿನಾಥ, ಮೈಲಾರಿ, ಇತರರಿದ್ದರು.

ಜಿಮ್ಸ್ ಆಸ್ಪತ್ರೆ ಜಿಲ್ಲಾ ಸಂಯೋಜಕರಾದ ಶಾಂತಾ ಜಕಾತಿ ಅವರು ಕಾರ್ಯಕ್ರಮ ನಿರೂಪಿಸಿದರು.

ಜಾಥಾಕ್ಕೆ ಚಾಲನೆ : 

ಇದಕ್ಕೂ ಮುನ್ನ ಕಲಬುರಗಿ ಜಿಲ್ಲಾ ಆಸ್ಪತ್ರೆ ಜಿಮ್ಸ್ ನಲ್ಲಿ ವಿಭಾಗೀಯ ಸಹ ನಿರ್ದೇಶಕರ ಕಚೇರಿಯ ಉಪನಿರ್ದೇಶಕ ಡಾ.ಅಂಬರಾಯ ರುದ್ರವಾಡಿ ಜಾಥಾಕ್ಕೆ ಚಾಲನೆ ನೀಡಿದರು. ಜಿಲ್ಲಾ ಆಸ್ಪತ್ರೆ ಜಿಮ್ಸ್ ಆವರಣದ ಮುಂಭಾಗದಿಂದ ಆರಂಭಗೊಂಡ ಈ ಜಾಥಾವು ಎಸ್.ಟಿ.ಬಿ.ಟಿ. ಮಾರ್ಗವಾಗಿ ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್ ಮಾರ್ಗವಾಗಿ ಜಿಮ್ಸ್ ಆಸ್ಪತ್ರೆಗೆ ಬಂದು ಕೊನೆಗೊಂಡಿತು.

ಈ ಜಾಥಾದಲ್ಲಿ ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News