ಕಲಬುರಗಿ | ಬೆಳೆ ಹಾನಿಗೀಡಾದ ಎಕರೆಗೆ 25 ಸಾವಿರ ರೂ. ಪರಿಹಾರಕ್ಕೆ ರೈತ ಸಂಘ ಆಗ್ರಹ
ಕಲಬುರಗಿ: ನೆರೆ ಹಾವಳಿಗೆ ತುತ್ತಾದ ರೖತರಿಗೆ ಬೆಳೆ ಪರಿಹಾರ ಮತ್ತು ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರಕ್ಕೆ ತೀರ್ಮಾನ ಕೖಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಆಲ್ ಇಂಡಿಯಾ ಕಿಸಾನ್ ಕೇತ್ ಮಜ್ದೂರ್ ಸಂಘಟನೆ (ಎಐಕೆಕೆಎಂಎಸ್) ಚಿತ್ತಾಪುರ ತಾಲೂಕು ಅಧ್ಯಕ್ಷ ಮಲ್ಲಣ್ಣ ದಂಡಬಾ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರವಾಹ ಬಿಕ್ಕಟ್ಟಿಗೆ ತತ್ತರಿಸಿದ ಚಿತ್ತಾಪುರ ತಾಲೂಕಿನ ಚಾಮನೂರ, ಕುಂದನೂರ, ಕೊಲ್ಲೂರ, ಇಂಗಳಗಿ ಹಾಗೂ ಕಡಬೂರ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿದ ವೇಳೆ ರೖತರು ಮತ್ತು ನೆರೆ ಸಂತ್ರಸ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರದಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿಬಿಟ್ಟಿದ್ದರಿಂದ ಮತ್ತು ಸನ್ನತಿ ಭೀಮಾ ಬ್ಯಾರೇಜ್ ಹಿನ್ನೀರು ಹೊಡೆತಕ್ಕೆ ಹಿಂದೆಂದೂ ಕಂಡರಿಯದ ಮಹಾ ಜಲಸ್ಪೋಟ ಉಂಟಾಗಿ ಸನ್ನತಿ, ಕೊಲ್ಲೂರ, ತುನ್ನೂರ, ಕಡಬೂರ, ಚಾಮನೂರ, ಕುಂದನೂರ, ಇಂಗಳಗಿ ಗ್ರಾಮಗಳು ಜಲಾವೃತಗೊಂಡು ಜನರು ತತ್ತರಿಸಿದ್ದಾರೆ. ಜನರ ಜೀವ ಸುರಕ್ಷತೆ ಕಡೆಗಣಿಸಿ ಬ್ಯಾರೇಜ್ ನಲ್ಲಿ ನೀರು ತಡೆಹಿಡಿದಿರುವುದೇ ಹಲವು ಗ್ರಾಮಗಳು ಮುಳುಗಡೆಯಾಗಲು ಕಾರಣವಾಗಿದೆ ಎಂದು ಆರೋಪಿಸಿದರು.
ಸತತ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ನೆರೆ ಹಾವಳಿಯಿಂದ ಸಾವಿರಾರು ಎಕರೆ ಕೃಷಿ ಭೂಮಿ ಸಂಪೂರ್ಣ ಮುಳುಗಡೆಯಾಗಿದೆ. ಸಾಲದ ಸುಳಿಗೆ ಸಿಲುಕಿರುವ ರೖತರು ತೀವ್ರ ತೊಂದರೆಯಲ್ಲಿದ್ದಾರೆ. ಅನ್ನ ಬಿತ್ತುವ ರೖತ ಮಣ್ಣು ತಿನ್ನಬೇಕಾದ ಪರಸ್ಥಿತಿ ಬಂದಿದೆ. ಈಗಾಗಲೇ ಕಲಬುರಗಿ ಜಿಲ್ಲೆ ಅತಿವೃಷ್ಟಿಗೆ ಬಲಿಯಾಗಿದೆ. ವರ್ಷದ ಗಂಜಿಗಾಗಿ ಮನೆಯಲ್ಲಿ ಕೂಡಿಡಲಾಗಿದ್ದ ದವಸ ದಾನ್ಯಗಳು ಪ್ರವಾಹ ಪರಸ್ಥಿತಿಗೆ ಸಿಲುಕಿ ನೀರುಪಾಲಾಗಿವೆ. ಇಂಥಹ ಭೀಕರ ಸಂಕಷ್ಟಕ್ಕೆ ತುತ್ತಾಗಿರುವ ರೖತರ ನೆರವಿಗೆ ಸರ್ಕಾರ ಮುಂದಾಗಬೇಕು. ಎಕರೆಗೆ 25,000 ರೂ. ಪರಿಹಾರ ಘೋಷಣೆ ಮಾಡಬೇಕು. ಸನ್ನತಿ, ಕಡಬೂರ, ಚಾಮನೂರ ಗ್ರಾಮಗಳನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.
ಎಸ್ ಯುಸಿಐ (ಕಮ್ಯುನಿಸ್ಟ್) ಪಕ್ಷದ ವಾಡಿ ಸಮಿತಿ ಕಾರ್ಯದರ್ಶಿ ಶರಣು ಹೇರೂರ, ಮುಖಂಡರಾದ ವೆಂಕಟೇಶ ದೇವದುರ್ಗ, ಭೀಮಪ್ಪ ಮಾಟನಳ್ಳಿ, ಗೋವಿಂದ ಯಳವಾರ, ಗೌತಮ್ ಪರ್ತೂರಕರ, ಸಾಬಣ್ಣ ಸುಣಗಾರ ಸೇರಿದಂತೆ ಪ್ರವಾಹ ಸಂತ್ರಸ್ತರು ಸಭೆಯಲ್ಲಿದ್ದರು.