Kalaburagi | ದಂಡವೊಂದೇ ಪರಿಹಾರವಲ್ಲ; ಸಮಗ್ರ ರಸ್ತೆ ಸುರಕ್ಷತಾ ನೀತಿ ಜಾರಿಗೊಳಿಸಿ : ಆಮ್ ಆದ್ಮಿ ಪಕ್ಷ
ಕಲಬುರಗಿ: ರಾಜ್ಯದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುವುದೊಂದೇ ಪರಿಹಾರವಲ್ಲ. ಅಪಘಾತಗಳಿಗೆ ಕಾರಣವಾಗುವ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಿ ಪರಿಣಾಮಕಾರಿ ರಸ್ತೆ ಸುರಕ್ಷತಾ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಈ ಕುರಿತು ಪಕ್ಷದ ರಾಜ್ಯ ಕಾರ್ಯದರ್ಶಿ ಶೇಖರ್ ಸಿಂಗ್ ನೇತೃತ್ವದಲ್ಲಿ ಮುಖಂಡರು ಕಲಬುರಗಿ ಜಿಲ್ಲಾಧಿಕಾರಿಗಳ ಮೂಲಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದರು.
ರಾಜ್ಯದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಮತ್ತು ನಗರ ಪ್ರದೇಶಗಳಲ್ಲಿನ ಅಪಘಾತ ಸಂಭವಿಸುವ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಶಾಶ್ವತವಾಗಿ ಸರಿಪಡಿಸಬೇಕು. ರಸ್ತೆಗಳಲ್ಲಿನ ಗುಂಡಿಗಳನ್ನು ಕಾಲಮಿತಿಯೊಳಗೆ ಮುಚ್ಚಿ ಗುಣಮಟ್ಟದ ರಸ್ತೆ ನಿರ್ಮಿಸಬೇಕು. ಅತಿವೇಗ ವಾಹನ ಚಾಲನೆ ನಿಯಂತ್ರಣಕ್ಕಾಗಿ ಹೆಚ್ಚಿನ ಸ್ಪೀಡ್ ಕ್ಯಾಮೆರಾಗಳು, ಸಿಸಿಟಿವಿ ಹಾಗೂ ಸ್ವಯಂಚಾಲಿತ ಸಂಚಾರ ನಿಯಂತ್ರಣ ವ್ಯವಸ್ಥೆ ಅಳವಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಬೇಕು. ಭಾರೀ ವಾಹನಗಳ ಅತಿಭಾರ ಸಾಗಣೆ ಹಾಗೂ ಚಾಲಕರ ಅತಿಯಾದ ಕೆಲಸದ ಅವಧಿಗೆ ನಿಯಂತ್ರಣ ಹೇರಬೇಕು. ಚಾಲನಾ ಪರವಾನಗಿ ನೀಡುವ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಮತ್ತು ಕಠಿಣಗೊಳಿಸಬೇಕು. ಶಾಲೆ-ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಪ್ರತಿ ಜಿಲ್ಲೆಯಲ್ಲಿ ರಸ್ತೆ ಅಪಘಾತ ವಿಶ್ಲೇಷಣಾ ಸಮಿತಿ ರಚಿಸಿ ಮಾಸಿಕ ವರದಿ ಪ್ರಕಟಿಸಬೇಕು. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಟ್ರಾಮಾ ಕೇರ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ 108 ತುರ್ತು ಸೇವೆಯನ್ನು ಮತ್ತಷ್ಟು ಬಲಪಡಿಸಬೇಕು. ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಪಾದಚಾರಿ ಮಾರ್ಗ, ಜೀಬ್ರಾ ಕ್ರಾಸಿಂಗ್, ರಸ್ತೆ ದೀಪಗಳು ಹಾಗೂ ಅಗತ್ಯ ಸೂಚನಾ ಫಲಕಗಳನ್ನು ಸಮರ್ಪಕವಾಗಿ ಅಳವಡಿಸಬೇಕು ಎಂದು ಒತ್ತಾಯಿಸಿದರು.
ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ, ಅಜಾಗರೂಕ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುವುದರ ಜೊತೆಗೆ ರಸ್ತೆ ಅಪಘಾತಗಳಿಗೆ ಕಾರಣವಾಗುವ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಹರಿಸುವ ರಸ್ತೆ ಸುರಕ್ಷತಾ ನೀತಿಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಪಕ್ಷ ಆಗ್ರಹಿಸಿದೆ.
ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಶೇಖರ್ ಸಿಂಗ್, ಆನಂದರಾಯ ಬಿಲಗುಂದಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.