ಕಲಬುರಗಿ | ಮಹಿಳಾ, ಯುವ ಸಬಲೀಕರಣಕ್ಕೆ ಪಂಚ ಗ್ಯಾರಂಟಿ ಪೂರಕ : ಎಸ್.ಆರ್.ಮೆಹರೋಝ್ ಖಾನ್
ಕಲಬುರಗಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣ ಮತ್ತು ಯುವ ಸಬಲೀಕಣದಲ್ಲಿ ರಾಜ್ಯ ದಾಪುಗಾಲು ಇಡುತ್ತಿದೆ. ಯುವ ನಿಧಿ ಯೋಜನೆ ಪರಿಣಾಮ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಶೇ.4.80 ರಿಂದ ಶೇ.2.25ಕ್ಕೆ ಕ್ಷೀಣಿಸಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಲಬುರಗಿ ವಿಭಾಗದ ಉಪಾಧ್ಯಕ್ಷ ಎಸ್.ಆರ್.ಮೆಹರೋಝ್ ಖಾನ್ ಹೇಳಿದರು.
ಬುಧವಾರ ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಯುವ ನಿಧಿ ಫಲಾನುಭವಿಗಳ ಸಂವಾದದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡ ಜನರ ಕಲ್ಯಾಣಕ್ಕೆ ಪ್ರತಿ ವರ್ಷ ಸುಮಾರು 52 ಸಾವಿರ ಕೋಟಿ ರೂ. ಖರ್ಚು ಮಾಡುವಂತಹ ಇಂತಹ ಯೋಜನೆಗಳು ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಇವು ಜನರ ಬದುಕು ಭದ್ರವಾಗಿಸಲು ಕಾರಣವಾಗಿವೆ ಎಂದು ಅಂತರರಾಷ್ಟ್ರೀಯ ಪ್ರತಿಷ್ಟಿತ ಸಂಸ್ಥೆಗಳು ತಮ್ಮ ಅಧ್ಯಯನದಲ್ಲಿ ತಿಳಿಸಿವೆ ಎಂದರು.
ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗಿನ ಇತರೆ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ವಿಚಾರ ವಿನಿಮಯದಲ್ಲಿ ಭಾಗಿಯಾಗಬೇಕು. ಕಠಿಣ ಪರಿಶ್ರಮವಿದಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ. ಗುಲ್ಬರ್ಗಾ ವಿವಿ ಉತ್ತಮ ಕ್ಯಾಂಪಸ್ ಹೊಂದಿದೆ. ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಯುವ ನಿಧಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಉಪಾಧ್ಯಕ್ಷರಾದ ಸೋಮಶೇಖರ ಹಿರೇಮಠ, ಮುಖ್ಯ ಯೋಜನಾಧಿಕಾರಿ ಎಸ್.ಎಸ್.ಮಠಪತಿ, ಯೋಜನಾ ನಿರ್ದೇಶಕ ಜಗದೇವಪ್ಪ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕಿ ಭಾರತಿ, ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮುರುಗೇಶ ಗುಣಾರೆ, ಸೇರಿದಂತೆ ಇತರರು ಇದ್ದರು. ವಿ.ವಿ. ಕುಲಸಚಿವ ಪ್ರೊ.ರಮೇಶ ಲಂಡನಕರ್ ಅವರು ಸರ್ವರನ್ನು ಸ್ವಾಗತಿಸಿದರು. ಯುವ ನಿಧಿ ಸಂಯೋಜಕ ಡಾ.ಪ್ರಕಾಶ ಕರೇಜನ್ ವಂದಿಸಿದರು.
ಕಳೆದ 11 ತಿಂಗಳಿನಿಂದ ಯುವನಿಧಿ ಯೋಜನೆಯಡಿ ಹಣ ಬರುತ್ತಿದೆ. ಪುಸ್ತಕ ಖರೀದಿ, ಉದ್ಯೋಗ ಪಡೆಯಲು, ತರಬೇತಿಗೆ ಅನುಕೂಲವಾಗಿದೆ.
-ಶಿವಲಿಂಗಯ್ಯ
ನಿರುದ್ಯೋಗ ಮುಕ್ತ ಕರ್ನಾಟಕ್ಕಾಗಿ ಯುವ ನಿಧಿ ಸಹಾಯವಾಗಿದೆ. ಯುವ ನಿಧಿ ಹಣದಿಂದ ಸಹೋದರನೊಂದಿಗೆ ಧಾರವಾಡದಲ್ಲಿ ಉದ್ಯೋಗದ ತರಬೇತಿ ಪಡೆಯುತ್ತಿರುವೆ. ಗೃಹ ಲಕ್ಣ್ಮಿ ಹಣ ಬರುತ್ತೆ. ಗೃಹ ಜ್ಯೋತಿ ಮನೆ ಬೆಳಗಿಸಿದೆ.
-ವಿಜಯಲಕ್ಷ್ಮಿ, ಸ್ನಾತಕೋತ್ತರ ಪದವೀಧರೆ
ಎಂ.ಎ. ಯಲ್ಲಿ ಇಂಗ್ಲೀಷ್ ಅಭ್ಯಾಸ ಮಾಡುತ್ತಿದ್ದು, ಪ್ರತಿ ತಿಂಗಳು ದೃಡೀಕರಣ ನೀಡಿದ್ದರೂ, ಕಳೆದ 3 ತಿಂಗಳಿನಿಂದ ಯುವ ನಿಧಿ ಹಣ ಬರುತ್ತಿಲ್ಲ.
-ಯಲ್ಲಲಿಂಗ
ಶಕ್ತಿ ಯೋಜನೆಯಡಿ ಲಿಂಗ ಬೇಧವಿಲ್ಲದೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೂ ಅವಕಾಶ ಕಲ್ಪಿಸಬೇಕು.
- ನಬಿ
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಹಲವಾರು ಊರುಗಳನ್ನು ನೋಡಲು ಸಹಾಯವಾಗಿದೆ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವಂತೆ ಈ ಯೋಜನೆ ಆಸರೆಯಾಗಿದೆ. ಉಚಿತ ಪ್ರಯಾಣದಿಂದ ಮಹಿಳೆಯರಿಗೆಉನ್ನತ ಶಿಕ್ಷಣಕ್ಕೆ ನೀರೆರೆಯುತ್ತಿದೆ.
-ಪೂಜಾ, ಕೆಮಿಸ್ಟ್ರಿ ವಿದ್ಯಾರ್ಥಿನಿ