ಕಲಬುರಗಿ| ತಲಾ ಆದಾಯ ಹೆಚ್ಚಳಕ್ಕೆ ದೂರದೃಷ್ಟಿ ಯೋಜನೆ ರೂಪಿಸಿ: ಪ್ರೊ.ಎಂ.ಗೋವಿಂದರಾವ್
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಯ ತಲಾ ಆದಾಯ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಿಸುವ ಗುರಿಯೊಂದಿಗೆ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮಂಡಳಿಯು ಹತ್ತು ಅಥವಾ ಪಂಚ ವಾರ್ಷಿಕ ದೂರದೃಷ್ಟಿ ಯೋಜನೆಗಳನ್ನು ರೂಪಿಸಬೇಕು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೋ.ಎಂ.ಗೋವಿಂದರಾವ್ ಹೇಳಿದರು.
ಕಲಬುರಗಿ ನಗರದ ಕೆ.ಕೆ.ಆರ್.ಡಿ.ಬಿ ಸಭಾಂಗಣದಲ್ಲಿ ಜರುಗಿದ ಕೆ.ಕೆ.ಆರ್.ಡಿ.ಬಿ. ಮಂಡಳಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮುಂದಿನ ಹತ್ತು ಅಥವಾ ಐದು ವರ್ಷಗಳಲ್ಲಿ ಆದ್ಯತಾ ಕ್ಷೇತ್ರದಲ್ಲಿ ಸುಧಾರಿಸುತ್ತೇವೆ ಎಂಬ ಗುರಿಯೊಂದಿಗೆ ಹೆಜ್ಜೆ ಇಡಬೇಕು ಎಂದರು.
ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಯಾವೆಲ್ಲ ವಲಯದಲ್ಲಿ ಈ ಭಾಗ ಹಿಂದುಳಿದಿದೆಯೂ ಅಲ್ಲಿ ಕೊರತೆಯನ್ನು ನೀಗಿಸುವ ಕೆಲಸ ಮಂಡಳಿ ಮುಂದಾಗಬೇಕು. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲಹೆ ನೀಡಬೇಕು. ಮಂಡಳಿ ಸರ್ಕಾರದಂತೆ ಎಲ್ಲದಕ್ಕೂ ಅನುದಾನ ನೀಡದೆ ಅದ್ಯತಾ ವಲಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಪ್ರದೇಶದ ಹಿಂದುಳಿವಿಕೆ ಹೋಗಲಾಡಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದು 371ಜೆ ಅನ್ವಯ ಕೆ.ಕೆ.ಆರ್.ಡಿ.ಬಿ. ಮಂಡಳಿ ಸ್ಥಾಪಿಸಿದ್ದು, ಮಂಡಳಿಯಿಂದ ನಡೆಯುವ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿ ಬಗ್ಗೆ ಪ್ರತಿನಿತ್ಯ ಮೇಲುಸ್ತುವಾರಿ ವಹಿಸುವುದು ಅವಶ್ಯಕವಾಗಿದೆ. ಹಣ ಖರ್ಚಾದರೆ ಸಾಲದು, ಜನರಲ್ಲಿ ಅದರಿಂದ ಬದಲಾವಣೆ ಕಾಣಬೇಕು. ಕಣ್ಣಿಗೆ ಕಾಣುವಂತೆ ಅಭಿವೃದ್ಧಿ ಕೆಲಸಗಳಾಗಬೇಕು ಎಂದರು.
ಬೇರೆ ಪ್ರದೇಶಕ್ಕೆ ಹೋಲಿಸಿದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಯಾವುದೇ ಮಂಡಳಿಗೆ ಅನುದಾನ ಹರಿದು ಬರುತ್ತಿಲ್ಲ. ವಿಶೇಷ ಮೀಸಲಾತಿ ಸೌಲಭ್ಯದಿಂದ ಕೆ.ಕೆ.ಆರ್.ಡಿ.ಬಿ.ಮಂಡಳಿಗೆ ಸಾವಿರಾರು ಕೋಟಿ ರೂ. ಹಣ ಬಿಡುಗಡೆಯಾಗುತ್ತಿದೆ. ಇದನ್ನು ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಅವರು ಹೇಳಿದರು.
ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾತನಾಡಿ, ಕಳೆದ 2 ವರ್ಷದಿಂದ ಮಂಡಳಿಯು ಆರೋಗ್ಯ, ಶಿಕ್ಷಣ, ಉದ್ಯೋಗ, ಅರಣ್ಯ ಅವಿಷ್ಕಾರದಂತಹ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 857 ಕೋಟಿ ರೂ. ವೆಚ್ಚದ ಆರೋಗ್ಯ ಇಲಾಖೆಯ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, ಇದರಲ್ಲಿ 300 ಕೋಟಿ ರೂ. ಕ್ಕಿಂತ ಹೆಚ್ಚಿನ ಹಣ ನೀಡಿ ಪ್ರದೇಶದ ಆರೋಗ್ಯ ಸುಧಾರಣೆಗೆ ಮಂಡಳಿ ಶ್ರಮಿಸುತ್ತಿದೆ. ಇಲ್ಲಿ ಕೈಗಾರಿಕೆ ಸ್ಥಾಪಿಸಿ, ಉದ್ಯೋಗ ಸೃಷ್ಠಿಗಾಗಿ ಇಂಡಸ್ಟ್ರಿ ಹಬ್ ಸ್ಥಾಪಿಸಲಾಗುತ್ತಿದೆ ಎಂದರು.
ಕೆ.ಕೆ.ಆರ್.ಡಿ.ಬಿ. ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್ ಅವರು ಪ್ರಾತ್ಯಕ್ಷಿಕೆ ಮೂಲಕ ಮಂಡಳಿಯ ಇದೂವರೆಗಿನ ಪ್ರಗತಿ ಕಾರ್ಯ ವಿವರಿಸುತ್ತಾ, ಪ್ರಸ್ತುತ 2025-26ನೇ ಸಾಲಿಗೆ 5,000 ಕೋಟಿ ರೂ. ಅನುದಾನ ಘೋಷಿಸಿದ್ದು, ಇದರಲ್ಲಿ ಶೇ.60ರಷ್ಟು ಅಂದರೆ 3,000 ಕೋಟಿ ರೂ. ಅನುದಾನ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಗೆ ಮೀಸಲಿರಿಸಿದೆ. ಉಳಿದಂತೆ ಶೇ.31ರಷ್ಟು ಅನುದಾನ ರಾಜ್ಯ ಸರ್ಕಾರ ಆಯವ್ಯಯದಲ್ಲಿ ಘೋಷಿಸುವ ಕಾರ್ಯಕ್ರಮಗಳಿಗೆ ಹಂಚಿಕೆ ಪ್ರಮಾಣದಲ್ಲಿ ಮಂಡಳಿ ಅನುದಾನ ನೀಡಲಿದೆ. ಉಳಿದಂತೆ ಮಂಡಳಿ ಅಧ್ಯಕ್ಷರು, ಯೋಜನಾ ಸಚಿವರು, ಮುಖ್ಯಮಂತ್ರಿಗಳು ತಲಾ ಶೇ.2 ವಿವೇಚನಾ ನಿಧಿ, ಶೇ.2 ಪ್ರಾದೇಶಿಕ ನಿಧಿ, ಶೇ.1ರಷ್ಟು ಹಣ ಆಡಳಿತಾತ್ಮಕ ವೆಚ್ಚವಾಗಿ ಬಳಸಲಾಗುತ್ತಿದೆ ಎಂದರು.
ಸಭೆಯಲ್ಲಿ ಸಮಿತಿ ಸದಸ್ಯೆ ಸಂಗೀತಾ ಕಟ್ಟಿಮನಿ, ಯೋಜನೆ ಮತ್ರು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮತ್ತು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಆರ್.ವಿಶಾಲ್, ಮಂಡಳಿಯ ಶಿಕ್ಷಣ ತಜ್ಞರ ಸಮಿತಿ ಅಧ್ಯಕ್ಷೆ ಪ್ರೊ.ಛಾಯಾ ದೇವಗಾಂವಕರ್, ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆ ಅಯುಕ್ತ ಅವಿನಾಶ ಶಿಂಧೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದ ನಿರ್ದೇಶಕ ಡಿ.ಬಿ.ಚಂದ್ರಶೇಖರಯ್ಯ, ಮಂಡಳಿ ಉಪ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಅಪರ ನಿರ್ದೇಶಕಿ ಪ್ರವೀಣ ಪ್ರಿಯಾ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
ಸಂಘ-ಸಂಸ್ಥೆಗಳೊಂದಿಗೆ ಸಭೆ:
ಮಂಡಳಿ ಸಭೆಯ ನಂತರ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ ಅವರು ಪ್ರದೇಶದ ಅಭಿವೃದ್ಧಿಗೆ ವಿವಿಧ ಸಂಘ-ಸಂಸ್ಥೆಗಳಿಂದ ಅಭಿಪ್ರಾಯ ಪಡೆದರು.
ಕೈಗಾರಿಕೆ, ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ, ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಅನೇಕರು ಸಲಹೆ ನೀಡಿದರು. ಇದಲ್ಲದೆ ಕಲಬುರಗಿಯಲ್ಲಿ ರೈಲ್ವೆ ವಿಭಾಗ ಕಚೇರಿ, ಪ್ರತಿಷ್ಟಿತ ಏಮ್ಸ್, ಐ.ಐ.ಐ.ಟಿ ಸಂಸ್ಥೆ ಸ್ಥಾಪನೆ, ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಬೇಕು. ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಪ್ರೋತ್ಸಾಹ ನೀಡಬೇಕು. ಪ್ರದೇಶಕ್ಕೆ ಕೇಂದ್ರ ಸರ್ಕಾರವು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಅಧ್ಯಕ್ಷರ ಮುಂದೆ ಇಟ್ಟರು.