×
Ad

ಕಲಬುರಗಿ | ಕಾರಾಗೃಹದ ಕೈದಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿಯ ಪ್ರಮಾಣ ಪತ್ರ, ನೂತನ ತರಬೇತಿದಾರರಿಗೆ ಕಿಟ್ ವಿತರಣೆ

Update: 2025-10-29 19:07 IST

ಕಲಬುರಗಿ: ಉಚಿತವಾಗಿ ಕಂಪ್ಯೂಟರ್ ತರಬೇತಿ ಪಡೆದಿರುವ ಕಲಬುರಗಿ ಕೇಂದ್ರ ಕಾರಾಗೃಹದ ಕೈದಿಗಳಿಗೆ ಪ್ರಮಾಣ ಪತ್ರ ಹಾಗೂ ನೂತನ ತರಬೇತಿದಾರರಿಗೆ ಕಿಟ್ ವಿತರಿಸುವ ಕಾರ್ಯಕ್ರಮವನ್ನು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಡಗಂಚಿ ಶಾಖೆಯ ಕಾರ್ಮಲ್ ಪಬ್ಲೀಕ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿಗಳಾದ ಫಾದರ್ ವಿಲಿಯಂ ಮಿರಿಂದಾ, ಕೇಂದ್ರ ಕಾರಾಗೃಹದ ಬಂಧಿಗಳ ಜೀವನ ಸುಧಾರಣೆಗಾಗಿ ಈ ಕಂಪ್ಯೂಟರ್ ತರಬೇತಿ ನಿಡಲಾಗುತ್ತಿದೆ. ಈ ತರಬೇತಿಯು ಉತ್ತಮ ಬದುಕು ನಡೆಸಲು ದಾರಿ ದೀಪವಾಗಲಿದ್ದು, ಬಂಧಿಗಳು ಈ ಕಂಪ್ಯೂಟರ್ ತರಬೇತಿ ಪಡೆದು ಉತ್ತಮ ಜೀವನ ನಡೆಸಬೇಕು ಎಂದರು.

ಅದಾನಿ ಗ್ರೂಪ್ ಸಂಯೋಜಿಕ ಅಶೋಕ ಬಿ ಹಾಲವಿ, ಇಂದಿನ ದಿನಗಳಲ್ಲಿ ಕಂಪ್ಯೂಟರ್ ಶಿಕ್ಷಣ ಮಹತ್ವ ಪಡೆದಿದ್ದು, ಹಾಗಾಗಿ ಇಲ್ಲಿ ನೀಡುವ ಕಂಪ್ಯೂಟರ್ ತರಬೇತಿಯನ್ನು ಪಡೆದು ಉತ್ತಮ ಜೀವನ ನಡೆಸಬೇಕು ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪ್ರಮಾಣ ಪತ್ರ ಹಾಗೂ ಕಿಟ್ ವಿತರಿಸಿ ಮಾತನಾಡಿದ ಮುಖ್ಯ ಅಧೀಕ್ಷಕರಾದ ಡಾ. ಅನಿತಾ ಆರ್., ಕಾರಾಗೃಹದಲ್ಲಿರುವ ಎಲ್ಲಾ ಬಂಧಿಗಳಿಗೆ ಸರದಿ ಪ್ರಕಾರವಾಗಿ ಕಂಪ್ಯೂಟರ್ ಶಿಕ್ಷಣ ನೀಡುವುದರ ಜೊತೆಗೆ ವಿವಿಧ ಕೌಶಲ್ಯಾಧಾರಿತ ತರಬೇತಿಗಳನ್ನು ಸಹ ನೀಡಲಾಗುತ್ತಿದೆ. ಪ್ರತಿಯೊಬ್ಬ ಬಂದಿಯು ವೃತ್ತಪರ ತರಬೇತಿಗಳನ್ನು ಪಡೆದು ಇಲ್ಲಿಂದ ಬಿಡುಗಡೆ ಹೊಂದಿ ಸಮಾಜದೊಂದಿಗೆ ಬೆರೆತು ಈ ಕಾರಾಗೃಹದಲ್ಲಿ ಪಡೆದ ತರಬೇತಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇನ್ನೊಬ್ಬರಿಗೆ ಮಾದರಿಯಾಗಿ ಬದುಕಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ 30 ಜನ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ 30 ಜನ ನೂತನ ಪ್ರಶೀಕ್ಷಣಾರ್ಥಿಗಳಿಗೆ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧೀಕ್ಷಕರಾದ ಎಂ.ಹೆಚ್. ಆಶೇಖಾನ್, ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಚನ್ನಪ್ಪ ಯಟಗ್ಲ್, ಕಾರ್ಮಲ್ ಜ್ಯೋತಿ, ಪಬ್ಲೀಕ್ ಚಾರಿಟೇಬಲ್ ಟ್ರಸ್ಟ್, ಕಡಗಂಚಿ ಶಾಖೆಯ ಸದಸ್ಯರಾದ ಫಾದರ್ ದೀಪಕ್ ಥಾಮಸ್, ಬ್ರದರ್ ಫ್ಲೇಮಿಂಗ್ ಹಾಗೂ ಕಂಪ್ಯೂಟರ್ ಶಿಕ್ಷಕ ಹರೀಶ್ ದತ್ತಾತ್ರೇಯ ಗೌಳಿ ಉಪಸ್ಥಿತರಿದ್ದರು. ಕಾರಾಗೃಹದ ಶಿಕ್ಷಕರಾದ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News