ಕಲಬುರಗಿ: ಖ್ವಾಜಾ ಬಂದಾ ನವಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ ಸಾಹೇಬ್ ಅವರ ಜನ್ಮದಿನಾಚರಣೆಯ ಅಂಗವಾಗಿ ಕೆಬಿಎನ್ ವಿಶ್ವವಿದ್ಯಾಲಯದ ಐಕ್ಯುಎಸಿ (IQAC) ಹಾಗೂ ವೈದ್ಯಕೀಯ ವಿಜ್ಞಾನಗಳ ನಿಕಾಯದ ಸಹಯೋಗದಲ್ಲಿ ಗುರುವಾರ ಮೆಗಾ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಯಿತು.

ಸೋನಿಯಾ ಗಾಂಧಿ ಕಾಲನಿ, ಖಮರ ಕಾಲನಿ, ಎಂಎಸ್‌ಕೆ ಮಿಲ್ ಹಾಗೂ ಖಾಜಾ ಬಜಾರ್ ಪ್ರದೇಶಗಳಲ್ಲಿ ನಡೆದ ಶಿಬಿರಗಳಲ್ಲಿ 2 ಸಾವಿರಕ್ಕೂ ಅಧಿಕ ಮಂದಿಗೆ ರಕ್ತದೊತ್ತಡ, ಮಧುಮೇಹ, ಕಣ್ಣು, ಕಿವಿ-ಮೂಗು-ಗಂಟಲು, ಚರ್ಮ, ಮೂಳೆ ಹಾಗೂ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧಗಳನ್ನು ವಿತರಿಸಲಾಯಿತು. ಅಗತ್ಯವಿದ್ದವರಿಗೆ ಉಚಿತ ರೀಡಿಂಗ್ ಗ್ಲಾಸ್‌ಗಳನ್ನೂ ನೀಡಲಾಯಿತು.

ಕೆಬಿಎನ್ ಆಸ್ಪತ್ರೆಯಲ್ಲಿ ನಡೆದ ಗರ್ಭಿಣಿಯರ ವಿಶೇಷ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸುಮಾರು 160 ಮಹಿಳೆಯರು ಭಾಗವಹಿಸಿದರು. ಬಿ.ಬಿ. ರಜಾ ಬಾಲಕಿಯರ ಪ್ರೌಢಶಾಲೆಯಲ್ಲಿ ಋತುಚಕ್ರ ನೈರ್ಮಲ್ಯದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಿ 240 ವಿದ್ಯಾರ್ಥಿನಿಯರಿಗೆ ಜ್ಯಾಮೆಟ್ರಿ ಬಾಕ್ಸ್‌ಗಳನ್ನು ವಿತರಿಸಲಾಯಿತು.

ಖಾಜಾ ಬಾಲಕರ ಪ್ರೌಢಶಾಲೆಯ 200 ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ದಂತ ತಪಾಸಣೆ ನಡೆಸಿ ಡೆಂಟಲ್ ಕಿಟ್‌ಗಳನ್ನು ವಿತರಿಸಲಾಯಿತು. ವಿಶ್ವವಿದ್ಯಾಲಯದ ಸ್ಕಿಲ್ ಲ್ಯಾಬ್‌ನಲ್ಲಿ ಸುಮಾರು 250 ಉಪನ್ಯಾಸಕರಿಗೆ ಸಿಪಿಆರ್ (CPR) ತರಬೇತಿ ನೀಡಲಾಯಿತು.

ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ, ವೃದ್ಧಾಶ್ರಮದ ನಿವಾಸಿಗಳು ಹಾಗೂ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ವಿತರಣೆ ಸೇರಿದಂತೆ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಯಿತು.

ಶಿಬಿರದಲ್ಲಿ ಪಿಜಿ ವಿದ್ಯಾರ್ಥಿಗಳು ಸೇರಿದಂತೆ 70ಕ್ಕೂ ಹೆಚ್ಚು ವೈದ್ಯರು ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿವಿಯ ಸಮ ಉಪಕುಲಪತಿ ಪ್ರೊ.ಅಶ್ಫಾಖ್ ಅಹ್ಮದ್, IQAC ನಿರ್ದೇಶಕ ಡಾ.ಮುಹಮ್ಮದ್ ಅಬ್ದುಲ್ ಬಷೀರ್, ಕುಲಸಚಿವ ಮಿರ್ ವಿಲಾಯತ್ ಅಲಿ, ಮೆಡಿಕಲ್ ಡೀನ್ ಡಾ.ಗುರುಪ್ರಸಾದ್ ಸೇರಿದಂತೆ ಅಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೆಬಿಎನ್ ಸೌಹಾರ್ದ ಬ್ಯಾಂಕ್ ವತಿಯಿಂದ 15 ಬಡಜನರಿಗೆ ಬಡ್ಡಿರಹಿತ ಸಾಲ ವಿತರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor