ಕಲಬುರಗಿ | ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಜೆಸ್ಕಾಂ ಇಂಜಿನಿಯರ್
ಶೇಖರ್ ಬಹುರೂಪಿ
ಕಲಬುರಗಿ: ವಿದ್ಯುತ್ ಹೆಚ್ಚುವರಿ ಟಿಸಿ, ಲೈನ್ ಮೈಂಟೆನನ್ಸ್, ಹೊಸ ಟಿಸಿಗಳು ಮತ್ತು ಗಂಗಾ ಕಲ್ಯಾಣ ಯೋಜನೆಗಳ ಬಿಲ್ಲುಗಳು ಪಾಸ್ ಮಾಡುದಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜೆಸ್ಕಾಂ ಇಂಜಿನಿಯರ್‌ರೊಬ್ಬರು ಮಂಗಳವಾರ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯ (ಗು.ವಿ.ಸ.ಕಂ.ನಿ) ಗ್ರಾಮೀಣ ವಿಭಾಗ-2ರ ಕಾರ್ಯನಿರ್ವಾಹಕ ಅಭಿಯಂತರ ಶೇಖರ್ ಬಹುರೂಪಿ ಎಂಬಾತರೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಅಧಿಕಾರಿ ಎಂದು ತಿಳಿದುಬಂದಿದೆ.
ಜೇವರ್ಗಿಯ ಕಾಂಟ್ರಾಕ್ಟರ್ ಸಾಯಬಣ್ಣ ಪೂಜಾರಿ ಲೋಕಾಯುಕ್ತಕ್ಕೆ ದೂರು ನೀಡಿದ ಮೇರೆಗೆ ಲೋಕಾಯುಕ್ತ ಪೊಲೀಸರು ಪ್ರತ್ಯೇಕ ತಂಡವನ್ನು ರಚಿಸಿ ಚುರುಕು ಕಾರ್ಯಾಚರಣೆಯಲ್ಲಿ ಆರೋಪಿ ಇಂಜಿನಿಯರ್ ಶೇಖರ್ ಅವರನ್ನು 2 ಲಕ್ಷ ರೂಪಾಯಿ ಹಣ ತೆಗೆದುಕೊಳ್ಳುತ್ತಿದ್ದ ವೇಳೆಯಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಬಿಕೆ.ಉಮೇಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೀತಾ ಬೆನಾಳ ಅವರ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದೆ. ತಂಡದಲ್ಲಿ ಪೊಲೀಸ್ ಸಿಬ್ಬಂದಿಯವರಾದ ಬಸವರಾಜ್, ಎಂ.ಜಿ.ರಾಣುಜಿ, ಪ್ರದೀಪ್, ಹಣಮಂತ, ವಸಂತ್ ಮತ್ತಿತರರು ಇದ್ದರು.