ಕಲಬುರಗಿ | ದಲಿತ ಸಂಘಟನೆಗಳ ಪಥಸಂಚಲನಕ್ಕೆ ಬೇರೆ ದಿನ ಅವಕಾಶ ಕೊಡಿ : ಡಾ.ಅಂಬಾರಾಯ ಅಷ್ಠಗಿ
ಕಲಬುರಗಿ: ಆರೆಸ್ಸೆಸ್ ಸಂಘಟನೆಗೆ ನೂರು ವರ್ಷಗಳ ಪೂರ್ಣಗೊಳಿಸಿದ ಪ್ರಯುಕ್ತ ದೇಶಾದ್ಯಂತ ಪಥಸಂಚಲನ ನಡೆಸುತ್ತಿದೆ. ಅದೇ ನಿಟ್ಟಿನಲ್ಲಿ ಚಿತ್ತಾಪೂರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಜಿಲ್ಲಾಡಳಿತ ಅವಕಾಶ ನೀಡಬೇಕು ಜೊತೆಗೆ ವಿವಿಧ ದಲಿತ ಸಂಘಟನೆಗಳಿಗೆ ಬೇರೆ ಬೇರೆ ದಿನ ಪಥಸಂಚಲನಕ್ಕೆ ಅವಕಾಶ ನೀಡಬೇಕೆಂದು ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಡಾ.ಅಂಬರಾಯ ಅಷ್ಟಗಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಶರಣ ಸೂಫಿ ಸಂತರ ನಾಡು. ಇದು ಶಾಂತಿ ಮತ್ತು ಸಹಬಾಳ್ವೆಯಿಂದ ಕೂಡಿದ ನಾಡಾಗಿದೆ. ಈ ನಾಡಿನಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ, ಅಲ್ಲದೆ ಆರೆಸ್ಸೆಸ್ ಸಂಘಟನೆಯ ಪಥಸಂಚಲನ ನಡೆಸುವ ದಿನವೇ ವಿವಿಧ ದಲಿತ ಸಂಘಟನೆಗಳು ಪಥಸಂಚಲನಕ್ಕೆ ಅವಕಾಶ ಕೇಳುತ್ತಿರುವುದು ಸರಿಯಲ್ಲವೆಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರಿಯಾಂಕ್ ಖರ್ಗೆಯವರಿಗೆ ಮಾಡಲು ಸಾಕಷ್ಟು ಕೆಲಸಗಳಿವೆ, ಕಲಬುರಗಿಯಲ್ಲಿ ಮಳೆಯಿಂದಾಗಿ ಸಾಕಷ್ಟು ಬೆಳೆ, ಮನೆ ಆಸ್ತಿಪಾಸ್ತಿಗಳು ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ, ಅವರಿಗೆ ನೆರವಿಗೆ ಬರುವುದನ್ನು ಬಿಟ್ಟು ಸಂಘಟನೆಗಳ ಬಗ್ಗೆ ಮಾತನಾಡಿ ವಿವಾದಕ್ಕೆ ಎಡೆಮಾಡಿಕೊಡಬಾರದು. ಹಿರಿಯ ರಾಜಕಾರಣಿಗಳಾಗಿರುವ ಡಾ.ಮಲ್ಲಿಕಾರ್ಜುನ ಖರ್ಗೆಯವರು ತಮ್ಮ 50ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲಾ ಸಮುದಾಯಗಳನ್ನು ಜೊತೆಗೆ ಕರೆದುಕೊಂಡು ದೇಶದ ಉನ್ನತ ಸ್ಥಾನಕ್ಕೆರಿದ್ದಾರೆ. ಆದರೆ ಅವರ ಮಾರ್ಗದರ್ಶನದಲ್ಲಿ ನಡೆಯಬೇಕಾಗಿದ್ದ ಪ್ರಿಯಾಂಕ್ ಖರ್ಗೆಯವರು ಸುಖಾಸುಮ್ಮನೆ ವಿವಾದ ಎಬ್ಬಿಸುವುದನ್ನು ಬಿಟ್ಟು ಕಲಬುರಗಿ ಅಬಿವೃದ್ದಿಗೆ ಒತ್ತು ನೀಡಬೇಕೆಂದು ಒತ್ತಾಯಿಸಿದರು.
ಎಐಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಕೂಡಲೇ ಮಧ್ಯಸ್ಥಿಕೆ ವಹಿಸಿ ಸಚಿವರಾದ ಪ್ರಿಯಾಂಕ್ ಖರ್ಗೆಯವರಿಗೆ ಮಾರ್ಗದರ್ಶನ ಮಾಡಿ ವಿವಾದಕ್ಕೆ ತೆರೆ ಎಳೆಯಬೇಕೆಂದು ಒತ್ತಾಯಿಸಿದರು.
ಮಾಜಿ ಮೇಯರ್ ವಿಶಾಲ ಧರ್ಗಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬಸವರಾಜ ಬೆಣ್ಣೂರ, ಮಲ್ಲಿಕಾರ್ಜುನ ಕುಸ್ತಿ, ಎಸ್.ಜಿ. ಭಾರತಿ, ಗಣೇಶ ವಳಕೇರಿ, ರವಿಚಂದ್ರ ವಂಟಿ, ಛತ್ರು ರಾಠೋಡ, ಸಂತೋಷ ಹಾದಿಮನಿ, ಶಿವಯೋಗಿ ನಾಗನಳ್ಳಿ ಸೇರಿದಂತೆ ಮತ್ತಿತರರಿದ್ದರು.